Mysore
20
broken clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ಮತ ಕಳ್ಳತನ ಆರೋಪ: ಎಸ್‌ಐಟಿ ತನಿಖೆಗೆ ನೀಡಲು ಸುಪ್ರೀಂಕೋರ್ಟ್‌ ನಕಾರ

ನವದೆಹಲಿ: ಕಳೆದ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರು ಮಾಡಿದ್ದ ಮತ ಕಳ್ಳತನ ಆರೋಪಗಳ ಬಗ್ಗೆ ಎಸ್‌ಐಟಿ ತನಿಖೆಗೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್‌ ವಜಾಗೊಳಿಸಿದೆ.

ನ್ಯಾಯಮೂರ್ತಿ ಸೂರ್ಯಕಾಂತ್‌ ನೇತೃತ್ವದ ಪೀಠವು ಅರ್ಜಿದಾರರು ಭಾರತೀಯ ಚುನಾವಣಾ ಆಯೋಗವನ್ನು ಸಂಪರ್ಕಿಸಬಹುದು ಎಂದು ಅಭಿಪ್ರಾಯಪಟ್ಟಿದೆ.

ಇನ್ನು ಮತದಾರರ ಪಟ್ಟಿಯಲ್ಲಿ ಅಕ್ರಮ ಎಸಗಲಾಗಿರುವುದರ ಸಂಬಂಧ ಚುನಾವಣಾ ಆಯೋಗದಲ್ಲಿ ದೂರು ಸಲ್ಲಿಸಿ ಎಂದು ಕೋರ್ಟ್‌ ಸೂಚನೆ ನೀಡಿತು. ಈ ವೇಳೆ ಅರ್ಜಿದಾರರ ಪರ ವಕೀಲರು ಉತ್ತರಿಸಿ, ಚುನಾವಣಾ ಆಯೋಗಕ್ಕೆ ದೂರು ಕೊಡಲಾಗಿದ್ದು, ಇನ್ನೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ವಾದಿಸಿದರು.

ಚುನಾವಣಾ ಆಯೋಗ ಯಾವಾಗ ಕ್ರಮ ಕೈಗೊಳ್ಳಬೇಕು ಎಂದು ಗಡುವು ನಿಗದಿ ಮಾಡಬೇಕು ಎಂದು ಅರ್ಜಿದಾರರು ಸರ್ವೋಚ್ಛ ನ್ಯಾಯಪೀಠಕ್ಕೆ ಮನವಿಯನ್ನೂ ಮಾಡಿದರು. ಈ ಮನವಿಯನ್ನು ಕೋರ್ಟ್‌ ತಿರಸ್ಕರಿಸಿದೆ.

ಇದನ್ನು ಓದಿ: ರಾಹುಲ್‌ ಗಾಂಧಿಗೆ ನೋಟಿಸ್‌: ಚುನಾವಣಾ ಆಯೋಗದವನ್ನೇ ಪ್ರಶ್ನಿಸಿದ ಡಿಸಿಎಂ ಡಿಕೆಶಿ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಡೆಸಿದ ಪತ್ರಿಕಾಗೋಷ್ಠಿಯನ್ನು ಈ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ, ಇದರಲ್ಲಿ ಬಿಜೆಪಿ ಮತ್ತು ಚುನಾವಣಾ ಆಯೋಗದ ನಡುವಿನ ಒಪ್ಪಂದದಿಂದಾಗಿ ಚುನಾವಣೆಯಲ್ಲಿ ದೊಡ್ಡ ಕ್ರಿಮಿನಲ್ ವಂಚನೆ ನಡೆದಿದೆ ಎಂದು ಸ್ಫೋಟಕ ಹೇಳಿಕೆಗಳನ್ನು ನೀಡಲಾಗಿತ್ತು. ಅದನ್ನು ರಾಹುಲ್ ಗಾಂಧಿ ಮತ ಕಳ್ಳತನ ಎಂದು ಕರೆದರು.
ಕರ್ನಾಟಕದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಅಕ್ರಮ ನಡೆದಿದೆ ಎಂದು ಮತದಾರರ ಪಟ್ಟಿಯ ಸಹಿತ ವಿವರಿಸಿದ್ದರು.

ನ್ಯಾಯಾಲಯದ ನಿರ್ದೇಶನಗಳನ್ನು ಪಾಲಿಸುವವರೆಗೆ ಮತ್ತು ಪಟ್ಟಿಗಳ ಸ್ವತಂತ್ರ ಲೆಕ್ಕಪರಿಶೋಧನೆ ಪೂರ್ಣಗೊಳ್ಳುವವರೆಗೆ ಮತದಾರರ ಪಟ್ಟಿಗಳ ಯಾವುದೇ ಪರಿಷ್ಕರಣೆ ಅಥವಾ ಅಂತಿಮಗೊಳಿಸುವಿಕೆಯನ್ನು ಕೈಗೊಳ್ಳಬಾರದು ಎಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಬೇಕೆಂದು ಮನವಿ ಮಾಡಲಾಗಿತ್ತು. ಆದರೆ ನ್ಯಾಯಾಲಯ ಯಾವುದನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ.

Tags:
error: Content is protected !!