Mysore
33
scattered clouds

Social Media

ಶುಕ್ರವಾರ, 28 ಮಾರ್ಚ್ 2025
Light
Dark

ಸಂಸದ ಯದುವೀರ್ ಒಡೆಯರ್ ಪ್ರಯತ್ನಕ್ಕೆ ಸಂದ ಫಲ:‌ ಪರವಾನಗಿ ರಹಿತ ತಂಬಾಕು ಬೆಳೆಗಾರರಿಗೂ ಮಾರಾಟಕ್ಕೆ ಅವಕಾಶ

– ಫೆಬ್ರವರಿ 6ರಂದು ವಾಣಿಜ್ಯ ಸಚಿವರನ್ನು ಭೇಟಿ ಮನವಿ ಸಲ್ಲಿಸಿದ್ದ ಸಂಸದ ಯದುವೀರ್
– ಮಾರಾಟಕ್ಕೆ ಅವಕಾಶ ನೀಡುವ ಭರವಸೆ ನೀಡಿದ್ದ ಸಚಿವರು
– ತಂಬಾಕು ಬೆಳೆಗಾರರ ಪರವಾಗಿ ದನಿ ಎತ್ತಿದ್ದ ಸಂಸದರು

ನವದೆಹಲಿ: ಪರವಾನಗಿ ರಹಿತ ತಂಬಾಕು ಬೆಳೆಗಾರರಿಗೆ ಮಾರಾಟಕ್ಕೆ ಅವಕಾಶ ನೀಡಬೇಕು ಹಾಗೂ ಅವರಿಗೆ ವಿಧಿಸಲಾಗುತ್ತಿದ್ದ ದಂಡ ಮನ್ನಾ ಮಾಡಬೇಕೆಂದು ಮೈಸೂರು-ಕೊಡಗು ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾಡಿದ್ದ ಮನವಿಗೆ ಸ್ಪಂದಿಸಿರುವ ಕೇಂದ್ರ ಸರ್ಕಾರ, ಕರ್ನಾಟಕದ ಬೆಳಗಾರರಿಗೆ ಸಿಹಿ ಸುದ್ದಿ ನೀಡಿದೆ.

ಪರವಾನಗಿ ರಹಿತ ತಂಬಾಕು ಬೆಳೆಗಾರರು ಎಫ್‌ಸಿವಿ ತಂಬಾಕು ಮಾರಾಟ ಮಾಡಲು ಅವಕಾಶ ನೀಡಲು ಹಾಗೂ ದಂಡ ವಿಧಿಸದೆ ಇರಲು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ನವದೆಹಲಿಯಲ್ಲಿ ಸಂಸದ ಯದುವೀರ್ ಒಡೆಯರ್‌ ಅವರು ಈ ಕುರಿತು ಮಾಹಿತಿ ನೀಡಿದ್ದು, ಕೇಂದ್ರ ಸರ್ಕಾರದ ಈ ನಿರ್ಧಾರ ಸ್ವಾಗತಾರ್ಹವಾಗಿದೆ. ಇದರಿಂದ ಸಾವಿರಾರು ಬೆಳೆಗಾರರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.

ಎಫ್‌ಸಿವಿ ತಂಬಾಕನ್ನು 53,325 ಹೆಕ್ಟೇರ್ ಪ್ರದೇಶದಲ್ಲಿ ಬೆಳಯಲಾಗುತ್ತಿದ್ದು, 40,487 ನೋಂದಾಯಿತ ಹಾಗೂ 12,838 ಪರವಾನಗಿ ರಹಿತ ಬೆಳೆಗಾರರು ಬೆಳೆಯುತ್ತಿದ್ದಾರೆ ಎಂದು ವಿವರಿಸಿದ್ದಾರೆ.

ಕೇಂದ್ರ ಸರ್ಕಾರದ ನಿರ್ಧಾರದಿಂದಾಗಿ ಪ್ರಮುಖವಾಗಿ 12,838 ತಂಬಾಕು ಬೆಳೆಗಾರರಿಗೆ ಅನುಕೂಲವಾಗಲಿದೆ. ಕರ್ನಾಟಕ ತಂಬಾಕು ಬೆಳೆಗಾರರ ಸಂಕಷ್ಟವನ್ನು ನಿವಾರಿಸಲು ಕೇಂದ್ರ ಬಿಜೆಪಿ ಸರ್ಕಾರ ಸಮರ್ಪಕ ನಿರ್ಧಾರ ಕೈಗೊಂಡಿದೆ ಎಂದು ತಿಳಿಸಿದ್ದಾರೆ.

ಕಳೆದ ಮೇ ಮತ್ತು ಜೂನ್ ತಿಂಗಳಿನಲ್ಲಿ ಸುರಿದ ಧಾರಾಕಾರ ಮಳೆಯಿಂದ ತಂಬಾಕು ಬೆಳೆ ನಷ್ಟವಾಗಿತ್ತು. ತಂಬಾಕು ಬೆಳೆ ಉಳಿಸಲು ಪರ್ಯಾಯ ಕ್ರಮಗಳನ್ನು ಕೈಗೊಳ್ಳುತ್ತಿದ್ದರಿಂದ ಒಟ್ಟಾರೆಯಾಗಿ ಬೆಳೆಗಾರರಿಗೆ ಉತ್ಪಾದನಾ ವೆಚ್ಚ ಹೆಚ್ಚಾಗುತ್ತಿತ್ತು. ಇದು ರೈತರನ್ನು ಸಂಕಷ್ಟಕ್ಕೆ ದೂಡಿತ್ತು ಎಂದು ಮನವರಿಕೆ ಮಾಡಿಕೊಡಲಾಗಿತ್ತು ಎಂದು ಸಂಸದರು ವಿವರಿಸಿದ್ದಾರೆ.

ಕಳೆದ ಫೆಬ್ರವರಿ.6ರಂದು ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿ ಮಾಡಿ ತಂಬಾಕು ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಮನವಿ ಸಲ್ಲಿಸಲಾಗಿತ್ತು. ಇದಕ್ಕೆ ಸಚಿವರು ಸ್ಪಂದಿಸಿ ಸೂಕ್ತ ನಿರ್ಧಾರ ಕೈಗೊಂಡಿದ್ದಾರೆ ಎಂದು ಯದುವೀರ್ ವಿವರಿಸಿದ್ದಾರೆ.

ಪ್ರಧಾನಿ, ವಾಣಿಜ್ಯ ಸಚಿವರಿಗೆ ಅಭಿನಂದನೆ:
ತಂಬಾಕು ಬೆಳೆಗಾರರಿಗೆ ಅನುಕೂಲಕರ ನಿರ್ಧಾರವನ್ನು ಕೈಗೊಂಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರಿಗೆ ನಮ್ಮ ಕರ್ನಾಟಕದ ತಂಬಾಕು ಬೆಳೆಗಾರರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಅತ್ಯಂತ ತ್ವರಿತವಾಗಿ ಸಚಿವರು ತೀರ್ಮಾನ ಮಾಡಿರುವುದು ರಾಜ್ಯದ ಮತ್ತು ನಮ್ಮ ಕ್ಷೇತ್ರ ವ್ಯಾಪ್ತಿಯ ಬೆಳೆಗಾರರಿಗೆ ಸಾಕಷ್ಟು ನೆರವಾಗಲಿದೆ ಎಂದು ಸಂಸದರು ತಿಳಿಸಿದ್ದಾರೆ.

Tags: