ನವದೆಹಲಿ: ಪಾದಯಾತ್ರೆ ಮಾಡುತ್ತಿದ್ದ ದೆಹಲಿಯ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಮೇಲೆ ವ್ಯಕ್ತಿಯೊಬ್ಬ ನೀರೆರಚಿ ಹಲ್ಲೆ ಮಾಡಲು ಮುಂದಾಗಿದ್ದ ಘಟನೆ ನಡೆದಿದೆ.
ಬಳಿಕ ಭದ್ರತಾ ಸಿಬ್ಬಂದಿ ಮತ್ತು ಕೇಜ್ರಿವಾಲ್ ಅವರ ಬೆಂಬಲಿಗರು ವ್ಯಕ್ತಿಯನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಕೇಜ್ರಿವಾಲ್ ದಕ್ಷಿಣ ದೆಹಲಿಯ ಮಾಳವೀಯ ನಗರದ ಪ್ರದೇಶವೊಂದರಲ್ಲಿ ತನ್ನ ಬೆಂಬಲಿಗರೊಂದಿಗೆ ನಡೆಯುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಅರವಿಂದ್ ಕೇಜ್ರಿವಾಲ್ ಅವರ ಮೇಲೆ ನೀರು ಎರಚಿದ ವ್ಯಕ್ತಿಯನ್ನು ಅಶೋಕ್ ಝಾ ಎಂದು ಗುರುತಿಸಲಾಗಿದ್ದು, ಆತನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಘಟನೆ ನಡೆಯುತ್ತಿದ್ದಂತೆ ರೊಚ್ಚಿಗೆದ್ದ ಆಮ್ ಆದ್ಮಿ ಪಕ್ಷದ ನಾಯಕರು, ದೆಹಲಿಯಲ್ಲಿ ಕಾನೂನು ಮತ್ತು ವ್ಯವಸ್ಥೆ ಕುಸಿದಿದೆ. ಕೇಂದ್ರ ಸರ್ಕಾರ ಮತ್ತು ಗೃಹ ಸಚಿವರು ಇದರ ಬಗ್ಗೆ ಏನೂ ಮಾಡುತ್ತಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.