ಹೊಸದಿಲ್ಲಿ: ಮೇಕ್ ಇನ್ ಇಂಡಿಯಾ ಯೋಜನೆಗೆ ಬಲ ನೀಡುವ ದಿಸೆಯಲ್ಲಿ ಕೇಂದ್ರ ಸರಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. 11 ಸಾವಿರ ಕೋಟಿ ರೂ. ವೆಚ್ಚದಲ್ಲಿ 12 ಸುಖೋಯ್ – 30 ಎಂಕೆಐ ಯುದ್ಧ ವಿಮಾನಗಳನ್ನು ಭಾರತೀಯ ವಾಯುಪಡೆಗೆ ಖರೀದಿಸುವ ಪ್ರಸ್ತಾವಕ್ಕೆ ರಕ್ಷಣಾ ಸಚಿವಾಲಯ ಶುಕ್ರವಾರ ಅನುಮೋದನೆ ನೀಡಿದೆ. ಜತೆಗೆ ಧ್ರುವಾಸ್ತ್ರ ಕ್ಷಿಪಣಿ ಖರೀದಿ ಹಾಗೂ ಡಾರ್ನಿಯರ್ ವಿಮಾನದ ಉನ್ನತೀಕರಣಕ್ಕೂ ಸಮ್ಮತಿ ನೀಡಲಾಗಿದೆ.
ಈ 12 ಸುಖೋಯ್ ಯುದ್ಧ ವಿಮಾನಗಳನ್ನು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಉತ್ಪಾದಿಸಲಿದೆ. ಅದರಲ್ಲೂ ಶೇ. 60ರಷ್ಟು ಉಪಕರಣಗಳು ದೇಶೀಯವಾಗಿರಲಿವೆ ಎಂದು ರಕ್ಷಣಾ ಸಚಿವಾಲಯದ ಮೂಲಗಳನ್ನು ಉಲ್ಲೇಖಿಸಿ ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.