ನವದೆಹಲಿ: ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಸಂಬಂಧ ಸುಪ್ರಿಂಕೋರ್ಟ್ ಮುಂದಿನ ಅರ್ಜಿ ವಿಚಾರಣೆಯನ್ನು ಜು.23ಕ್ಕೆ ಮುಂದೂಡಿದೆ.
ಪ್ರತಿವಾದಗಳಿಗೆ ಇನ್ನು ನೋಟೀಸ್ ತಲುಪದ ಕಾರಣ ಅರ್ಜಿ ವಿಚಾರಣೆಯನ್ನು ಜು.23ಕ್ಕೆ ಮುಂದೂಡುತ್ತಿದ್ದೇವೆ ಎಂದು ಸುಪ್ರಿಂಕೋರ್ಟ್ ನ್ಯಾಯಮೂರ್ತಿಗಳಾದ ಸಂಜಯ್‍ಕುಮಾರ್ ಹಾಗೂ ನ್ಯಾಯಮೂರ್ತಿ ವಿನೋದ ಚಂದ್ರ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ವಕೀಲರಿಗೆ ಸೂಚಿಸಿತು.
ಮುಂದುವರೆದ ಅರ್ಜಿಯನ್ನು ಕೈಗೆತ್ತಿಕೊಂಡು ವಿಚಾರಣೆ ಆರಂಭಿಸಿದ ದ್ವಿಸದಸ್ಯ ಪೀಠ ಪ್ರತಿವಾದಗಳಿಗೆ ಇನ್ನೂ ನೋಟೀಸ್ ತಲುಪದ ಕಾರಣ ಅರ್ಜಿ ಮುಂದೂಡುತ್ತಿದ್ದೇವೆ. ಅಲ್ಲಿಯವರೆಗೂ ಹಿಂದೆ ನೀಡಿದ್ದ ಆದೇಶ ಯಥಾಸ್ಥಿತಿಯಲ್ಲಿಯೇ ಮುಂದುವರೆಯಲಿ ಎಂದು ವಕೀಲರಿಗೆ ನಿರ್ದೇಶನ ನೀಡಿದರು.
ಈ ಹಿಂದೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ತಡೆಯಾಜ್ಞೆ ಮುಂದುವರೆಯಲಿದೆ. ಮುಂದಿನ ಅರ್ಜಿ ವಿಚಾರಣೆವರೆಗೂ ನಾವು ನೀಡಿದ್ದ ಯಥಾಸ್ಥಿತಿಯನ್ನು ಕಾಪಾಡಿಕೊಂಡು ಹೋಗಬೇಕೆಂದು ಸೂಚಿಸಿತು.
ಕಳೆದ ಮೇ.2ರಂದು ನಡೆದ ಅಂಚೆಮತಗಳ ಮರುಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಡಿ.ಎನ್.ಜೀವರಾಜ್ ಅವರು 52 ಮತಗಳ ಅಂತರದಿಂದ ವಿಜೇತರಾಗಿದ್ದರು. ಇದನ್ನು ಪ್ರಶ್ನಿಸಿ ಪರಾಜಿತ ಅಭ್ಯರ್ಥಿ ಡಿ.ಜಿ.ರಾಜೇಗೌಡ ಅವರು ಸುಪ್ರೀಂಕೋರ್ಟ್‍ಗೆ ಮೇಲನವಿ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್‍ನ ದ್ವಿಸದಸ್ಯ ಪೀಠ ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡಿ ಪ್ರಜಾಪ್ರಭುತ್ವವನ್ನು ಹೈಜಾಕ್ ಮಾಡಲು ಬಿಡುವುದಿಲ್ಲ ಎಂದು ಕಠಿಣ ಶಬ್ದಗಳಲ್ಲಿ ಆದೇಶ ನೀಡಿ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಸೂಚಿಸಿತ್ತು.
ಇದರಿಂದಾಗಿ ರಾಜೇಗೌಡ ಅವರು ಪುನಃ ಶಾಸಕ ಸ್ಥಾನವನ್ನು ಪಡೆದರೆ ವಾರದ ಹಿಂದೆಯಷ್ಟೇ ಶಾಸಕ ಸ್ಥಾನ ಪಡೆದುಕೊಂಡಿದ್ದ ಜೀವರಾಜ್‍ಗೆ ಕಾನೂನು ಹೋರಾಟದಲ್ಲಿ ಭಾರೀ ಹಿನ್ನಡೆಯಾಗಿತ್ತು.




