ಪಶ್ಚಿಮ ಬಂಗಾಳ: “ರೆಮೆಲ್” ಚಂಡಮಾರುತ ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶಕ್ಕೆ ಅಪ್ಪಳಿಸಿದ್ದು, ತೀವ್ರ ಬಿರುಗಾಳಿಯಿಂದ ಭೂಕುಸಿತ ಕಂಡುಬಂದಿದೆ. ಗಾಳಿಯ ವೇಗ ಗಂಟೆಗೆ 110-135 ಕಿಮೀ ವೇಗದಲ್ಲಿ ಚಲಿಸಲಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.
ಈ ಬೆನ್ನಲ್ಲೇ ರೆಮೆಲ್ ಅಬ್ಬರ ಜೋರಾಗಿದ್ದು, ಪಶ್ಚಿಮ ಬಂಗಾಳ ದಾಟಿ, ಈ ಚಂಡಮಾರುತ ಈಗ ಅಸ್ಸಾಂಗೆ ಕಾಲಿಟ್ಟಿದೆ. ತೀವ್ರ ಬಿರಗಾಳಿ ಸಹಿತ ಮಳೆಯಾಗುವ ಸಂಭವ ಇರುವುದರಿಂದ ಅಸ್ಸಾಂನ 7 ಜಿಲ್ಲೆಗಳಿಗೆ ʼರೆಡ್ ಅಲರ್ಟ್ʼ ಹಾಗೂ 11 ಜಿಲ್ಲೆಗಳಿಗೆ ʼಆರೆಂಜ್ ಅಲರ್ಟ್ʼ ಘೋಷಣೆ ಮಾಡಲಾಗಿದೆ.
ನಿನ್ನೆ (ಮೇ.26) ಪಶ್ಚಿಮ ಬಂಗಾಳಕ್ಕೆ ಅಪ್ಪಳಿಸಿದ ಚಂಡಮಾರುತ ಈಶಾನ್ಯ ದಿಕ್ಕಿನೆಡೆಗೆ ಚಲಿಸುವ ಮನ್ಸೂಚನೆಯಿದೆ. ಹಾಗಾಗಿ ಅಸ್ಸಾಂ ಭಾಗದಲ್ಲಿ ಹೆಚ್ಚಿನ ಸುರಕ್ಷತಾ ಕ್ರಮ ವಹಿಸಿ, ಎಚ್ಚರಿಕೆಯಿಂದ ಇರುವಂತೆ ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಸೂಚಿಸಿದೆ.
ಇನ್ನು ಸೋಮವಾರದಿಂದ 2 ದಿನಗಳ ಕಾಲ 42 ರೈಲುಗಳನ್ನು ರದ್ದುಗೊಳಿಸಲಾಗಿದೆ ಎಂದು ಈಶಾನ್ಯ ಗಡಿ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ. ಇದರ ಜೊತೆಗೆ ಇಂದು ಮತ್ತು ನಾಳೆ ಅಸ್ಸಾಂ ರಾಜ್ಯದಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಪ್ರಧಾನಿ ಸಭೆ: ರೆಮೆಲ್ ಚಂಡಮಾರುತ ಭಾರತಕ್ಕೆ ನುಗ್ಗಿರುವ ಬಗ್ಗೆ ಮತ್ತು ಅಗತ್ಯಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದರು.
ಲೋಕ ಕಲ್ಯಾಣ ಮಾರ್ಗ ನಿವಾಸದಲ್ಲಿ ಅಧಿಕಾರಿಗಳ ಸಭೆ ಕರೆದು, ಚಂಡ ಮಾರುತ ಎದುರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೈಗೊಂಡಿರುವ ಕಾರ್ಯಗಳ ಕುರಿತು ಪಿಎಂ ಮಾಹಿತಿ ಪಡೆದರು.
ರೆಮೆಲ್ ಚಂಡಮಾರುತ ಹಿನ್ನೆಲೆ ಪ್ರತಿಯೊಬ್ಬರ ಸುರಕ್ಷತೆ ಮತ್ತು ಯೋಗಕ್ಷೇಮಕ್ಕಾಗಿ ನಾನು ಪ್ರಾರ್ಥಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.