ಜೋಧ್ಪುರ: ರಾಜಸ್ಥಾನದಲ್ಲಿ ವ್ಯಕ್ತಿಯೊಬ್ಬನ ಹೊಟ್ಟೆಯಿಂದ ವೈದ್ಯರು 63 ನಾಣ್ಯಗಳನ್ನು ಹೊರತೆಗೆದಿರುವ ವಿಚಿತ್ರವಾದ ಘಟನೆ ನಡೆದಿದೆ. 36 ವರ್ಷದ ವ್ಯಕ್ತಿ ತೀವ್ರ ಹೊಟ್ಟೆನೋವು ಎಂದು ಒದ್ದಾಡಿದ ನಂತರ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಹೊಟ್ಟೆನೋವೆಂದು ಬಂದ ರೋಗಿಯನ್ನು ಪರೀಕ್ಷಿಸಿದಾಗ ಆತನ ಹೊಟ್ಟೆಯಲ್ಲಿ ನಾಣ್ಯಗಳು ಇರುವುದು ಪತ್ತೆಯಾಗಿದೆ. ರಾಜಸ್ಥಾನದ ವೈದ್ಯರು ಎಂಡೋಸ್ಕೋಪಿಕ್ ಪ್ರಕ್ರಿಯೆಯ ಮೂಲಕ ಆ ವ್ಯಕ್ತಿಯ ಹೊಟ್ಟೆಯಿಂದ 63 ನಾಣ್ಯಗಳನ್ನು ಹೊರತೆಗೆದಿದ್ದಾರೆ.
ಜೋಧ್‌ಪುರದ ಎಂಡಿಎಂ ಆಸ್ಪತ್ರೆಯಲ್ಲಿ 2 ದಿನಗಳ ಕಾಲ ನಡೆದ ಕಾರ್ಯಾಚರಣೆಯ ಬಳಿಕ ನಾಣ್ಯಗಳನ್ನು ಹೊರಗೆ ತೆಗೆಯಲಾಗಿದೆ. ಆ ವ್ಯಕ್ತಿ ಖಿನ್ನತೆಯಿಂದ ಈ ನಾಣ್ಯಗಳನ್ನು ನುಂಗಿದ್ದ ಎಂದು ಹೇಳಲಾಗಿದೆ. “ಆಸ್ಪತ್ರೆಗೆ ಬಂದ ಅವರು 10-15 ನಾಣ್ಯಗಳನ್ನು ನುಂಗಿದ್ದಾರೆ ಎಂದು ನಮ್ಮ ಬಳಿ ಹೇಳಿದರು. ನಾವು ಹೊಟ್ಟೆಯ ಎಕ್ಸ್-ರೇ ನಡೆಸಿದಾಗ ನಾಣ್ಯಗಳ ರಾಶಿಯೇ ಅಲ್ಲಿರುವುದು ಕಂಡುಬಂದಿತು” ಎಂದು ಗ್ಯಾಸ್ಟ್ರೋಎಂಟರಾಲಜಿ ವಿಭಾಗದ ಮುಖ್ಯಸ್ಥ ನರೇಂದ್ರ ಭಾರ್ಗವ್ ವಿವರಿಸಿದ್ದಾರೆ.