ನವದೆಹಲಿ: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಸಾಗುತ್ತಿರುವ ಮಹಾಕುಂಭಮೇಳದಲ್ಲಿ ಮೌನಿ ಅಮಾವಾಸ್ಯೆಯಂದು ತ್ರಿವೇಣಿ ಸಂಗಮ ತೀರದಲ್ಲಿ ಅನೇಕ ಮಂದಿ ಕಾಲ್ತುಳಿತಕ್ಕೆ ಸಿಕ್ಕಿ ಸಾವನ್ನಪ್ಪಿದ್ದು, ಉತ್ತರ ಪ್ರದೇಶ ಸರ್ಕಾರ ವಿರುದ್ಧ ಸಂಸದ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ವಿಐಪಿ ಸಂಪ್ರದಾಯಕ್ಕೆ ಸಂಪೂರ್ಣ ಲಗಾಮ ಹಾಕಿ, ಸಾರ್ವಜನಿಕರ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಸೂಕ್ತ ವ್ಯವಸ್ಥೆಗಳನ್ನು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಇಂದು(ಜನವರಿ.29) ಮೌನಿ ಅಮಾವಾಸ್ಯೆಯಂದು ತ್ರಿವೇಣಿ ಸಂಗಮ ತೀರದಲ್ಲಿ ಅನೇಕ ಮಂದಿ ಮೃತಪಟ್ಟು, ಗಾಯಗೊಂಡಿರುವ ಸುದ್ದಿ ಅತ್ಯಂತ ದುಃಖಕರವಾಗಿದೆ. ಹೀಗಾಗಿ ಮೃತರ ಕುಟುಂಬಗಳಿಗೆ ನನ್ನ ಸಂತಾಪಗಳು. ಇನ್ನೂ ಗಾಯಗೊಂಡವರು ಶೀಘ್ರವೇ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.
ಇನ್ನೂ ಉತ್ತರ ಪ್ರದೇಶದ ಸರ್ಕಾರ ಅಸಮರ್ಪಕ ವ್ಯವಸ್ಥೆ ಹಾಗೂ ಸಾಮಾನ್ಯ ಸಾರ್ವಜನಿಕರ ಬದಲಿಗೆ ವಿಐಪಿ ಚಲನವಲನಕ್ಕೆ ವಿಶೇಷ ಆದ್ಯತೆ ನೀಡಿರುವುದು ಈ ದುರಂತಕ್ಕೆ ಕಾರಣವಾಗಿದೆ ಎಂದು ಆರೋಪಿಸಿದ್ದಾರೆ.