Mysore
21
overcast clouds
Light
Dark

ಪ್ರಧಾನಿ ಅಭ್ಯರ್ಥಿ: ನನ್ನ ಆಯ್ಕೆ ರಾಹುಲ್‌ ಎಂದ ಖರ್ಗೆ

ನವದೆಹಲಿ: ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ಪ್ರಧಾನಿ ಅಭ್ಯರ್ಥಿ ಯಾರು ಎಂಬ ಪ್ರಶ್ನೆಗೆ ಇಂಡಿಯ ಬಣ ಖಚಿತವಾಗಿ ಉತ್ತರ ನೀಡಿರಲಿಲ್ಲ. ಚುನಾವಣೆ ಮುಗಿದು ಫಲಿತಾಂಶದ ಬಳಿಕ ಇಂಡಿಯಾ ಬಣ ಗೆದ್ದರೆ ಆ ನಂತರ ಪ್ರಧಾನಿ ಅಭ್ಯರ್ಥಿಯನ್ನು ಅಂತಿಮಗೊಳಿಸಲಾಗುವುದು ಎಂದು ಮೈತ್ರಿ ಕೂಟದ ನಾಯಕರು ಹೇಳುತ್ತಿದ್ದರು. ಆದರೆ, ಇದೀಗ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಉತ್ತರಿಸಿ ಪ್ರಧಾನಿ ಅಭ್ಯರ್ಥಿಯಾಗಿ ರಾಹುಲ್‌ ಗಾಂಧಿ ನನ್ನ ಆಯ್ಕೆ ಎಂದಿದ್ದಾರೆ.

ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ಇಂಡಿಯಾ ಬಣ ಗೆದ್ದರೆ ಪ್ರಧಾನಿ ಅಭ್ಯರ್ಥಿ ಹುದ್ದೆಗೆ ರಾಹುಲ್‌ ಗಾಂಧಿ ನನ್ನ ಆಯ್ಕೆ ಎಂದು ಹೇಳುವ ಮೂಲಕ ಖರ್ಗೆ ರಾಹುಲ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಎನ್‌ಡಿಟಿವಿಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಮಲ್ಲಿಕಾರ್ಜುನ ಖರ್ಗೆ, ಎರಡು ಬಾರಿ ಭಾರತ್‌ ಜೋಡೊ ಯಾತ್ರೆ ಕೈಗೊಂಡಿದ್ದು, ಈ ಬಾರಿಯ ಚುನಾವಣೆಗೆ ಸಾಕಷ್ಟು ನೆರವಾಯಿತು. ಈ ನಡುವೆ ಹಲವು ಪಕ್ಷಗಳೊಂದಿಗೆ ವೇದಿಕೆ ಹಂಚಿಕೊಂಡಿದ್ದೇವೆ. ಮೋದಿ ದಾಳಿಯನ್ನು ಸಮರ್ಥವಾಗಿ ನಿಭಾಯಿಸಿ, ಎದುರಿಸಿದ ರೀತಿಯಿಂದಾಗಿ ಅವರೇ ಪ್ರಧಾನಿ ಹುದ್ದೆಗೆ ಸೂಕ್ತ ಎಂದಿದ್ದಾರೆ.

ರಾಹುಲ್‌ ದೇಶದ ಉದ್ದಗಲಕ್ಕೂ ಯುವ ಸಮೂಹವನ್ನು ಪ್ರತಿನಿಧಿಸಲಿದ್ದಾರೆ. ಜನರ ಕಷ್ಟಗಳನ್ನ ಅರಿತಿದ್ದಾರೆ. ಅನೇಕರು ರಾಹುಲ್‌ರನ್ನು ಪ್ರಧಾನಿ ಹುದ್ದೆಗೆ ಒಮ್ಮತದ ಅಭ್ಯರ್ಥಿಯಾಗಿ ನೋಡಿದ್ದಾರೆ. ಆಗಾಗಿ ಪ್ರಧಾನಿ ಅಭ್ಯರ್ಥಿಗೆ ರಾಹುಲ್‌ ಗಾಂಧಿ ಅವರೇ ಸೂಕ್ತ ಎಂದು ಹೇಳಿದ್ದಾರೆ.

ಪ್ರಸಕ್ತ ಚುನಾವಣೆ ಮೂಲಕವೇ ಪ್ರಿಯಾಂಕ ಗಾಂಧಿ ರಾಜಕೀಯ ಪ್ರವೇಶಿಸಬೇಕು ಎಂಬುದಿತ್ತು. ಅದರಂತೆ ರಾಯ್‌ಬರೇಲಿಯಿಂದ ಅವರು ಕಣಕ್ಕಿಳಿಯಬೇಕು ಎಂಬ ನಿರ್ಧಾರವು ಆಗಿತ್ತು.  ಆದರೆ ಅಣ್ಣ ರಾಹುಲ್‌ ಸ್ಪರ್ಧಿಸಲಿ, ನಾನು ಅವರ ಪರವಾಗಿ ಪ್ರಚಾರದಲ್ಲಿ ತೊಡಗುತ್ತೇನೆ ಎಂದು ಪ್ರಿಯಾಂಕ ಕಣದಿಂದ ಹಿಂದೆ ಸರಿದಿದ್ದರು ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.