ಕೇರಳ: ವಯನಾಡ್ ಲೋಕಸಭಾ ಕ್ಷೇತ್ರದ ಸಂಸದೆ ಪ್ರಿಯಾಂಕಾ ಗಾಂಧಿ ಅವರು ನಾಳೆ ತಮ್ಮ ಸಹೋದರ ರಾಹುಲ್ ಗಾಂಧಿ ಅವರೊಂದಿಗೆ ಸಾರ್ವಜನಿಕ ಸಮಾವೇಶ ನಡೆಸಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಈ ಕುರಿತು ನಾಳೆ(ನ.30) ಮಧ್ಯಾಹ್ನ ತಿರುವಂಬಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮುಕ್ಕಂನಲ್ಲಿ ಜಂಟಿ ಸಾರ್ವಜನಿಕ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ. ನಂತರ ನಿಲಂಬೂರಿನ ಕರುಳೈ, ವಂಡೂರ್ ಹಾಗೂ ಎರನಾಡಿನ ಎಡವನ್ನಾದಲ್ಲಿ ಕ್ರಮವಾಗಿ ಮಧ್ಯಾಹ್ನ ಸುಮಾರು 2.15 ಗಂಟೆಯಿಂದ 3.30ರವರೆಗೆ ಹಾಗೂ 4.30 ರಿಂದ ಸಮಾವೇಶಗಳು ಜರುಗಲಿವೆ ಎಂಬ ವಿಚಾರ ಪಕ್ಷದ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಸಂಸದೆ ಪ್ರಿಯಾಂಕಾ ಗಾಂಧಿ ಅವರು ತಮ್ಮ ಚೊಚ್ಚಲ ಚುನಾವಣೆ ಸ್ಪರ್ಧೆಯಲ್ಲಿ ತಮ್ಮ ಸಹೋದರ ರಾಹುಲ್ ಗಾಂಧಿ ಅವರಿಗಿಂತಲೂ ಅಧಿಕ ದಾಖಲೆ ಮೊತ್ತದ ಮತಗಳನ್ನು ಪಡೆದು ವಿಜೇತರಾಗಿದ್ದರು. ಪ್ರಿಯಾಂಕಾ ಅವರು 4,10,931 ದಾಖಲೆ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದು, ಇಂದು(ನ.29) ಅಧಿಕೃತವಾಗಿ ಕೇರಳ ಸಾಂಪ್ರದಾಯಿಕ ಉಡುಗೆಯನ್ನು ತೊಟ್ಟು ಸಂಸದೆಯಾಗಿ ಸಂವಿಧಾನದ ಪ್ರತಿ ಹಿಡಿದು ಪ್ರಮಾಣ ವಚನ ಸ್ವೀಕರಿದ್ದಾರೆ.