ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್‌ನ 123ನೇ ಸಂಚಿಕೆಯನ್ನು ಪ್ರಸಾರ ಮಾಡಲಾಯಿತು.
ರೇಡಿಯೋ ಕಾರ್ಯಕ್ರಮದ ಆರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಂತರಾಷ್ಟ್ರೀಯ ಯೋಗ ದಿನದ ಬಗ್ಗೆ ಸುದೀರ್ಘ ಚರ್ಚೆ ನಡೆಸಿದರು.
ಈ ಬಗ್ಗೆ ಮಾತನಾಡಿದ ಅವರು, ಈ ಸಮಯದಲ್ಲಿ ನೀವೆಲ್ಲರೂ ಯೋಗದ ಶಕ್ತಿಯಿಂದ ಮತ್ತು ಅಂತರಾಷ್ಟ್ರೀಯ ಯೋಗ ದಿನದ ನೆನಪುಗಳಿಂದ ತುಂಬಿರಬೇಕು. ಈ ಬಾರಿಯೂ ಜೂನ್.21ರಂದು ದೇಶ ಹಾಗೂ ಪ್ರಪಂಚದ ಕೋಟ್ಯಾಂತರ ಜನರು ಅಂತರಾಷ್ಟ್ರೀಯ ಯೋಗ ದಿನದಲ್ಲಿ ಭಾಗಿಯಾಗಿದ್ದರು.
ಇದು 10 ವರ್ಷಗಳ ಹಿಂದೆ ಪ್ರಾರಂಭವಾಯಿತು ಎಂಬುದನ್ನು ನೀವು ನೆನಪಿನಲ್ಲಿಡಬೇಕು ಎಂದು ಹೇಳಿದ ಅವರು, ಈಗ 10 ವರ್ಷಗಳಲ್ಲಿ ಈ ಪ್ರವೃತ್ತಿ ಪ್ರತಿ ವರ್ಷ ಹೆಚ್ಚು ಹೆಚ್ಚು ಭವ್ಯವಾಗುತ್ತಿದೆ. ಇದು ಹೆಚ್ಚು ಹೆಚ್ಚಿ ಜನರು ತಮ್ಮ ದೈನಂದಿನ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಳ್ಳುತ್ತಿದ್ದಾರೆ ಎಂಬುದರ ಸೂಚನೆಯಾಗಿದೆ ಎಂದು ಹೇಳಿದರು.
ಯೋಗ ದಿನದ ಧ್ಯೇಯವಾಕ್ಯ ಉಲ್ಲೇಖಿಸಿದ ಮೋದಿ ಅವರು, ಒಂದು ಭೂಮಿಗಾಗಿ ಯೋಗ, ಒಂದು ಆರೋಗ್ಯ ಎಂಬುದು ಬಹಳ ವಿಶೇಷವಾಗಿತ್ತು. ಇದು ಕೇವಲ ಘೋಷಣೆಯಲ್ಲ. ಇದು ವಸುಧೈವ ಕುಟುಂಬಕಂ ಎಂಬುದನ್ನು ನಮಗೆ ಅರಿತುಕೊಳ್ಳುವ ನಿರ್ದೇಶನವಾಗಿದೆ. ಈ ವರ್ಷದ ಯೋಗ ದಿನದ ಭವ್ಯತೆ ಖಂಡಿತವಾಗಿಯೂ ಹೆಚ್ಚು ಹೆಚ್ಚು ಜನರು ಯೋಗವನ್ನು ಅಳವಡಿಸಿಕೊಳ್ಳಲು ಸ್ಪೂರ್ತಿ ನೀಡುತ್ತದೆ ಎಂದು ನನಗೆ ಖಚಿತವಾಗಿದೆ ಎಂದರು.
ಇನ್ನು ತುರ್ತು ಪರಿಸ್ಥಿತಿ ಘೋಷಣೆಯಾಗಿ 50 ವರ್ಷ ಆದ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಭಾರತದ ಜನರಿಗೆ ಕಿರುಕುಳ ನೀಡಲಾಯಿತು. ಆ ಸಮಯದಲ್ಲಿ ಪ್ರಜಾಪ್ರಭುತ್ವವನ್ನು ಕೊಲೆ ಮಾಡಲಾಯಿತು ಎಂದು ಬೇಸರ ವ್ಯಕ್ತಪಡಿಸಿದರು.





