ನವದೆಹಲಿ: ಕೇಂದ್ರ ಸರ್ಕಾರ ವಿಮಾ ವಲಯದಲ್ಲಿ ಶೇ.100ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ ಕಲ್ಪಿಸಲು ಮುಂದಾಗಿದ್ದು, ಇದಕ್ಕೆ ಸಂಬಂಧಿಸಿದ ವಿಮಾ ತಿದ್ದುಪಡಿ ಮಸೂದೆಯನ್ನು ಚಳಿಗಾಲದ ಸಂಸತ್ ಅಧಿವೇಶನದಲ್ಲಿ ಮಂಡಿಸುವ ಸಾಧ್ಯತೆ ಕಡಿಮೆ ಇದೆ ಎಂದು ಅಧಿಕಾರಿ ಮೂಲಗಳು ತಿಳಿಸಿವೆ.
ಈ ಕುರಿತು ಕೇಂದ್ರ ಹಣಕಾಸು ಸೇವೆಗಳ ಇಲಾಖೆಯೂ ವಿಮಾ ತಿದ್ದುಪಡಿ ಕರಡು ಮಸೂದೆ ಬಗ್ಗೆ ಜನರಿಂದ ಅಭಿಪ್ರಾಯಪಡೆಯಲು ಡಿಸೆಂಬರ್ 10ರವರೆಗೆ ಆಹ್ವಾನಿಸಲಾಗಿದೆ. ಆದರೆ ಅದನ್ನು ವಿಮಾ ವಲಯದ ಪ್ರತಿನಿಧಿಗಳಿಂದ ಅಭಿಪ್ರಾಯ ಸ್ವೀಕರಿಸಿ ಪರಾಮರ್ಶೆ ನಡೆಸಿದ ನಂತರವೇ ಮಸೂದೆಯನ್ನು ಅಂತಿಮಗೊಳಿಸಲಾಗುವುದು. ಹೀಗಾಗಿ ಈ ಪ್ರಕ್ರಿಯೆಯನ್ನು ಚಳಿಗಾಲದ ಅಧಿವೇಶನದಲ್ಲಿ ಪೂರ್ಣಗೊಳಿಸಲು ಸಮಯದ ಅಭಾವವಿರುವುದರಿಂದ ವಿಮಾ ತಿದ್ದುಪಡಿ ಮಸೂದೆ ಮಂಡನೆಯನ್ನು ಬಜೆಟ್ ಅಧಿವೇಶನದಲ್ಲಿ ಮಂಡನೆ ಮಾಡುವ ಸಾಧ್ಯತೆ ಇವೆ ಎಂದು ಮಾಹಿತಿ ಲಭ್ಯವಾಗಿದೆ.
ಕೇಂದ್ರ ಸರ್ಕಾರದ ಹಣಕಾಸು ಸಚಿವಾಲಯವು ವಿಮಾ ಕಾಯ್ದೆ 1938ರ ಅನ್ವಯ ತಿದ್ದುಪಡಿ ಮಾಡುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾಪಿಸಿದ್ದು, ವಿಮಾ ಕಂಪನಿಗಳಲ್ಲಿ ಎಫ್‌ಡಿಐ ಹೂಡಿಕೆ, ಒಂದೇ ಕಂಪನಿಗೆ ಜೀವ ವಿಮೆ ಹಾಗೂ ಆರೋಗ್ಯ ಅಥವಾ ಸಾಮಾನ್ಯ ಸೌಲಭ್ಯ ನೀಡಲು ಸಂಯೋಜಿತ ಪರವಾಗಿ ವಿಮಾ ಮಸೂದೆ ತಿದ್ದುಪಡಿಯನ್ನು ಸಲ್ಲಿಸಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.





