ನವದೆಹಲಿ: ನೆರೆಯ ಪಾಕಿಸ್ತಾನ ಭಾರತದ ಜೊತೆ ಪರೋಕ್ಷ ಯುದ್ಧ ನಡೆಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಈ ಕುರಿತು ಖ್ಯಾತ ಪಾಡ್‌ಕ್ಯಾಸ್ಟರ್ ಲೆಕ್ಸ್ ಫ್ರಿಡ್‌ಮನ್ ಅವರ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಭಾರತ, ಪಾಕ್ ವಿಭಜನೆ ಮತ್ತು ನಂತರದ ರಕ್ತಪಾತದ ವಿಚಾರವನ್ನು ಹಂಚಿಕೊಂಡಿದ್ದಾರೆ.
ಪಾಕಿಸ್ತಾನ ಯಾವಾಗಲೂ ಭಾರತದೊಂದಿಗೆ ಭಿನ್ನಾಭಿಪ್ರಾಯ ಹೊಂದಲು ನಿರ್ಧರಿಸಿತು. ನಮ್ಮ ವಿರುದ್ಧ ಪರೋಕ್ಷ ಯುದ್ಧವನ್ನು ನಡೆಸಿದ್ದಾರೆ. ಒಂದು ರೀತಿಯಲ್ಲಿ ಭಯೋತ್ಪಾದನೆ ಮತ್ತು ಭಯೋತ್ಪಾದಕ ಮನಸ್ಥಿತಿ ಪಾಕಿಸ್ತಾನದಲ್ಲಿ ಆಳವಾಗಿ ಬೇರೂರಿದೆ. ಇದು ಭಾರತಕ್ಕೆ ಮಾತ್ರವಲ್ಲ. ಜಗತ್ತಿನ ಭಯೋತ್ಪಾದನೆಯ ಕೇಂದ್ರಬಿಂದು ಪಾಕಿಸ್ತಾನ ಎಂದು ಕಿಡಿಕಾರಿದರು.
ಇನ್ನು ಮುಂದುವರಿದು ಮಾತನಾಡಿದ ಅವರು, ಪಾಕಿಸ್ತಾನದ ಜನರು ಸಹ ಶಾಂತಿಯನ್ನು ಬಯಸುತ್ತಿದ್ದಾರೆ ಎಂದು ನಾನು ನಂಬುತ್ತೇನೆ. ಯಾಕೆಂದರೆ ಮಕ್ಕಳನ್ನು ಕೊಲ್ಲುವ ಮತ್ತು ಲೆಕ್ಕವಿಲ್ಲದಷ್ಟು ಜೀವಗಳನ್ನು ನಾಶಮಾಡುವ ನಿರಂತರ ಭಯೋತ್ಪಾದನೆಯಿಂದ ಅವರು ಬೇಸತ್ತಿದ್ದಾರೆ. ಭವಿಷ್ಯದಲ್ಲಿ ಅವರು ಶಾಂತಿಯ ಮಾರ್ಗವನ್ನು ಆರಿಸಿಕೊಳ್ಳಬಹುದು ಎಂದು ತಿಳಿಸಿದರು.





