ಹೊಸದಿಲ್ಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿ ಪ್ರಕರಣವನ್ನು ಕೇಂದ್ರ ಗೃಹ ಸಚಿವಾಲಯ ಎನ್‌ಐಎ ತನಿಖೆಗೆ ವಹಿಸಿದ್ದು, ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದ್ದಾರೆಂದು ತಿಳಿದುಬಂದಿದೆ.
ದಾಳಿಯ ಹೊಣೆಯನ್ನು ಪಾಕಿಸ್ತಾನ ಮೂಲದ ಉಗ್ರ ಸಂಘಟನೆ ಲಷ್ಕರ್-ಇ-ತೊಯ್ಬಾಗೆ ಸಂಬಂಧಿಸಿದ ರೆಸಿಸ್ಟೆನ್ಸ್ ಫ್ರಂಟ್ ಹೊತ್ತುಕೊಂಡಿದೆ.
ಈ ಹಿನ್ನೆಲೆಯಲ್ಲಿ ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಗೃಹ ಸಚಿವಾಲಯದ ಭಯೋತ್ಪಾದನಾ ನಿಗ್ರಹ ಮತ್ತು ಪ್ರತಿ-ಆಮೂಲಾಗ್ರೀಕರಣ ವಿಭಾಗವು ತನಿಖೆಯನ್ನು ಎನ್‌ಐಗೆ ವಹಿಸಿದ್ದು, ಹೊಸ ಎಫ್ಐಆರ್‌ಅನ್ನು ದಾಖಲಿಸಿದೆ.
ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಎನ್‌ಐಎ, ಭಯೋತ್ಪಾದಕ ದಾಳಿಯಲ್ಲಿ ಬದುಕುಳಿದವರ ಹೇಳಿಕೆಗಳನ್ನು ದಾಖಲಿಸಿದೆ.
ಈ ನಡುವೆ ಗುಪ್ತಚರ ಸಂಸ್ಥೆಗಳು ಕೇಂದ್ರಾಡಳಿತ ಪ್ರದೇಶದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ 14 ಸ್ಥಳೀಯ ಭಯೋತ್ಪಾದಕರ ಪಟ್ಟಿಯನ್ನು ಸಂಗ್ರಹಿಸುತ್ತಿದ್ದು, ಇದರ ನಡುವಲ್ಲೇ ಎನ್‌ಐಎ ತನಿಖೆ ಆರಂಭವಾಗಿದೆ.
ಈ ಉಗ್ರರು, ಹಿಜ್ಬುಲ್ ಮುಜಾಹಿದ್ದೀನ್, ಲಷ್ಕರ್-ಇ-ತೊಯ್ಬಾ ಮತ್ತು ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿದ್ದಾರೆಂದು ತಿಳಿದುಬಂದಿದೆ.
ಪಟ್ಟಿಯಲ್ಲಿರುವ 14 ಮಂದಿ ಭಯೋತ್ಪಾದಕರು ದಕ್ಷಿಣ ಕಾಶ್ಮೀರದಾದ್ಯಂತ, ವಿಶೇಷವಾಗಿ ಅನಂತ್‌ನಾಗ್ ಮತ್ತು ಪುಲ್ವಾಮಾ ಜಿಲ್ಲೆಗಳಲ್ಲಿ ಸಕ್ರಿಯವಾಗಿದ್ದಾರೆಂದು ಹೇಳಲಾಗುತ್ತಿದ್ದು, ಭದ್ರತಾ ಪಡೆಗಳು ಈ ಪ್ರದೇಶದಲ್ಲಿ ಕಾರ್ಯಾಚರಣೆಯನ್ನು ಚುರುಕುಗಳಿಸಿದೆ.





