Mysore
18
overcast clouds

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಬಿಹಾರ ಸಿಎಂ ಆಗಿ ನಿತೀಶ್ ಪ್ರಮಾಣ : ದಾಖಲೆಯ ೧೦ನೇ ಬಾರಿಗೆ ಪ್ರಮಾಣವಚನ ಸ್ವೀಕರಿಸಿದ ಸಂ.ದಳ ನಾಯಕ

ಪಾಟ್ನಾ : ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದ ಭರ್ಜರಿ ಗೆಲುವಿನ ನಂತರ, ಸಂ.ದಳ ಮುಖ್ಯಸ್ಥ ನಿತೀಶ್ ಕುಮಾರ್ ಅವರು ಗುರುವಾರ ದಾಖಲೆಯ ೧೦ನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

ಗುರುವಾರ ಬೆಳಗ್ಗೆ ೧೧.೩೦ಕ್ಕೆ ಪಾಟ್ನಾದ ಗಾಂಧಿ ಮೈದಾನದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಎನ್‌ಡಿಎ ಬಲಪ್ರದರ್ಶನದ ನಡುವೆ ನಿತೀಶ್ ಕುಮಾರ್ ಅವರು ಬಿಹಾರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

ಬಿಹಾರ ರಾಜ್ಯಪಾಲ ಆರಿಫ್ ಮೊಹ್ಮದ್ ಖಾನ್ ಅವರು ನಿತೀಶ್ ಕುಮಾರ್ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ನಂತರ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾದ ಸಾಮ್ರಾಟ್ ಚೌಧರಿ ಮತ್ತು ವಿಜಯ್ ಕುಮಾರ್ ಸಿನ್ಹಾ ಅವರು ಉಪ ಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದರು.

ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಇತರ ಹಲವಾರು ಕೇಂದ್ರ ಸಚಿವರು ಮತ್ತು ೧೧ ಎನ್‌ಡಿಎ-ಬಿಜೆಪಿ ಆಡಳಿತದ ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸಿದ್ದರು.

೨೪೩ ಸದಸ್ಯರ ವಿಧಾನಸಭೆಯಲ್ಲಿ ಎನ್‌ಡಿಎ ೨೦೨ ಸ್ಥಾನಗಳನ್ನು ಗೆದ್ದುಕೊಂಡಿದ್ದು, ಬಿಜೆಪಿ ೮೯, ಜೆಡಿ(ಯು) ೮೫, ಎಲ್‌ಜೆಪಿ(ಆರ್‌ವಿ) ೧೯, ಎಚ್‌ಎಎಂ ೫ ಮತ್ತು ಆರ್‌ಎಲ್‌ಎಂ ೪ ಸ್ಥಾನಗಳನ್ನು ಗೆದ್ದುಕೊಂಡಿದೆ.

ನಿತೀಶ್ ಕುಮಾರ್ ಅವರ ಸಂಪುಟದ ಭಾಗವಾಗಿ ಬಿಜೆಪಿಯಿಂದ ೧೪ ಮಂದಿ, ಸಂ.ದಳದಿಂದ ಸಿಎಂ ನಿತೀಶ್ ಜೊತೆಗೆ ಏಳು ಮಂದಿ ಸ್ಥಾನ ಪಡೆದಿದ್ದಾರೆ. ಜಿತನ್ ರಾಮ್ ಮಾಂಝಿ ನೇತೃತ್ವದ ಹಿಂದೂಸ್ತಾನಿ ಅವಾಮ್ ಮೋರ್ಚಾ (ಜಾತ್ಯತೀತ) ಮತ್ತು ಉಪೇಂದ್ರ ಕುಶ್ವಾಹ ನೇತೃತ್ವದ ರಾಷ್ಟ್ರೀಯ ಲೋಕ ಮೋರ್ಚಾ (ಆರ್‌ಎಲ್‌ಎಂ) ತಲಾ ಒಬ್ಬ ಸಚಿವರನ್ನು ಹೊಂದಿದೆ.

ಜಿತನ್ ರಾಮ್ ಮಾಂಝಿ ಅವರ ಪುತ್ರ ಸಂತೋಷ್ ಕುಮಾರ್ ಸುಮನ್, ಉಪೇಂದ್ರ ಕುಶ್ವಾಹ ಅವರ ಪುತ್ರ ದೀಪಕ್ ಪ್ರಕಾಶ್ ಅವರು ಪಕ್ಷದಿಂದ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಚಿರಾಗ್ ಪಾಸ್ವಾನ್ ನೇತೃತ್ವದ ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) ಕೂಡ ಎರಡು ಸಚಿವ ಸ್ಥಾನವನ್ನು ಪಡೆಯಿತು. ಎಲ್ಲರೂ ಪ್ರಮಾಣ ವಚನ ಸ್ವೀಕರಿಸಿದರು.

Tags:
error: Content is protected !!