ಪುಣೆ: ದೇಶದಲ್ಲಿ ಹೊಸದಾಗಿ ಮಂದಿರ-ಮಸೀದಿಗಳ ವಿವಾದಗಳನ್ನು ಹುಟ್ಟುಹಾಕುತ್ತಿರುವುದಕ್ಕೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಕೆಲವು ವ್ಯಕ್ತಿಗಳು, ಅಯೋಧ್ಯೆಯ ರಾಮಮಂದಿರ ನಿರ್ಮಾಣದ ನಂತರ, ಅಂತಹ ವಿವಾದಗಳನ್ನು ಕೆರಳಿಸುವ ಮೂಲಕ ಹಿಂದುಗಳ ನಾಯಕರಾಗಬಹುದೆಂದು ಭಾವಿಸಿದ್ದಾರೆ. ಆದರೆ, ಅದು ಸ್ವೀಕಾರಾರ್ಹವಲ್ಲ ಎಂದು ಹರಿಹಾಯ್ದಿದ್ದಾರೆ.
ಎಲ್ಲರನ್ನು ಒಳಗೊಳ್ಳುವ ಸಮಾಜದ ಅಗತ್ಯವಿದೆ. ದೇಶವು ಸಾಮರಸ್ಯದಿಂದ ಬದುಕಬಹುದು ಎಂಬುದನ್ನು ಜಗತ್ತಿಗೆ ತೋರಿಸಬೇಕಾಗಿದೆ ಎಂದರು.
ನಾವು ಅನಾದಿ ಕಾಲದಿಂದಲೂ ಬದುಕುತ್ತಿದ್ದೇವೆ. ಈ ಸೌಹಾರ್ದವನ್ನು ನಾವು ಜಗತ್ತಿಗೆ ನೀಡಬೇಕಾದರೆ, ನಾವು ಅದರ ಮಾದರಿಯನ್ನು ರೂಪಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಹಿಂದುಗಳ ನಂಬಿಕೆಯ ವಿಷಯವಾಗಿದ್ದರಿಂದ ರಾಮಮಂದಿರವನ್ನು ನಿರ್ಮಿಸಲಾಗಿದೆ ಎಂದು ಹೇಳಿರುವ ಭಾಗವತ್ ಅವರು, ಪ್ರತಿದಿನ ಹೊಸ ವಿವಾದ ಉದ್ಭವಿಸುತ್ತಿವೆ. ಇದಕ್ಕೆ ಹೇಗೆ ಅನುಮತಿಸುವುದು? ಇಂತಹದ್ದನ್ನು ಮುಂದುವರಿಸಲು ಸಾಧ್ಯವಿಲ್ಲ. ನಾವೆಲ್ಲರೂ ಒಟ್ಟಿಗೆ ಬದುಕಬಲ್ಲೆವು ಎಂಬುದನ್ನು ಭಾರತವು ತೋರಿಸಬೇಕಾಗಿದೆ ಎಂದು ಯಾವುದೇ ನಿರ್ದಿಷ್ಟ ವಿವಾದಿತ ಸ್ಥಳ ಉಲ್ಲೇಖಿಸದೇ ಹೇಳಿದರು.
ಈ ಮೂಲಕ ಮಂದಿರ-ಮಸೀದಿಗಳ ಹೊಸ ವಿವಾದದ ಬಗ್ಗೆ ಮೋಹನ್ ಭಾಗವತ್ ಕಳವಳ ವ್ಯಕ್ತಪಡಿಸಿದ್ದಾರೆ.