ನವದೆಹಲಿ: ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಕಿಂಗ್‌ಪಿನ್ ರಾಕಿ ಅಲಿಯಾಸ್ ರಾಕೇಶ್ ರಂಜನ್‌ನನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.
ನಳಂದ ಮೂಲದ ರಾಕಿ ಅಲಿಯಾಸ್ ರಾಕೇಶ್ ರಂಜನ್, ಪ್ರಕರಣದ ಮಾಸ್ಟರ್ ಮೈಂಡ್ ಸಂಜೀವ್ ಮುಖಿಯಾ ಅವರ ಸಂಬಂಧಿ ಎಂದು ಹೇಳಲಾಗಿದ್ದು, ಪಾಟ್ನಾದ ಹೊರವಲಯದಲ್ಲಿ ಸಿಬಿಐ ಆತನನ್ನು ಬಂಧಿಸಿದೆ.
ಪೇಪರ್ ಸೋರಿಕೆ ಪ್ರಕರಣ ಬೆಳಕಿಗೆ ಬಂದ ನಂತರ ನಾಪತ್ತೆಯಾಗಿದ್ದ ರಾಕೇಶ್ ರಂಜನ್‌ಗಾಗಿ ಸಿಬಿಐ ತೀವ್ರ ಶೋಧ ನಡೆಸಿತ್ತು. ಅಂತಿಮವಾಗಿ ಇಂದು ಬೆಳಿಗ್ಗೆಯೇ ಸಿಬಿಐ ಕಿಂಗ್‌ಪಿನ್ ರಾಕಿಯನ್ನು ಬಂಧಿಸಿದೆ.
ಬಂಧಿತ ಆರೋಪಿಯನ್ನು ಪಾಟ್ನಾದ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ವಿಚಾರಣೆ ನಡೆಸಿದ ಕೋರ್ಟ್ ರಾಕೇಶ್ ರಂಜನ್‌ನನ್ನು ಹೆಚ್ಚಿನ ವಿಚಾರಣೆಗಾಗಿ 10 ದಿನಗಳ ಕಾಲ ಸಿಬಿಐ ಕಸ್ಟಡಿಗೆ ನೀಡಿದೆ.
ರಾಕೇಶ್ ರಂಜನ್ ಬಂಧನದ ನಂತರ ಸಿಬಿಐ ಪಾಟ್ನಾ ಮತ್ತು ಹತ್ತಿರದ ಪ್ರದೇಶಗಳಲ್ಲಿ ಮೂರು ಕಡೆ ಮತ್ತು ಕೋಲ್ಕತ್ತಾದ ಒಂದು ಸ್ಥಳಗಳಲ್ಲಿ ತೀವ್ರ ಶೋಧ ನಡೆಸಿತು.
ಈ ಮುಂಚೆ ಸಿಬಿಐ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್‌ನ ಹಜಾರಿಬಾಗ್ ಮೂಲದ ಓಯಸಿಸ್ ಶಾಲೆಯ ಪ್ರಾಂಶುಪಾಲ ಮತ್ತು ಉಪ ಪ್ರಾಂಶುಪಾಲರನ್ನು ಬಂಧಿಸಿತ್ತು. ಇದರ ಜೊತೆಗೆ ಸುಟ್ಟ ಪ್ರಶ್ನೆ ಪತ್ರಿಕೆಗಳನ್ನು ಬಿಹಾರ ಪೊಲೀಸರು ವಶಪಡಿಸಿಕೊಂಡಿದ್ದಾರೆ.