ನವದೆಹಲಿ: ಕೇಂದ್ರ ಸರ್ಕಾರದ ವತಿಯಿಂದ ಇತ್ತೀಚೆಗೆ ಜಾರಿಗೊಳಿಸಲಾದ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿ 2026ರ ಫೆಬ್ರವರಿ.12ರಂದು ದೇಶವ್ಯಾಪಿ ಮುಷ್ಕರಕ್ಕೆ ಕಾರ್ಮಿಕ ಸಂಘಟನೆಗಳು ಕರೆ ನೀಡಿವೆ.
ಕಾರ್ಮಿಕ ಸಂಹಿತೆಗಳ ಅನುಷ್ಠಾನಕ್ಕೆ ನಿಯಮಗಳನ್ನು ರೂಪಿಸುವ ಪ್ರಯತ್ನವನ್ನು ಸರ್ಕಾರ ಕೈಬಿಡದಿದ್ದರೆ ಅನೇಕ ದಿನಗಳ ಕಾಲ ಮುಷ್ಕರ ಮುಂದುವರಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ದೇಶದ ಬಹುತೇಕ ಎಲ್ಲಾ ಕಾರ್ಮಿಕರ ಸಂಘಟನೆಗಳನ್ನು ಒಳಗೊಂಡ ಕಾರ್ಮಿಕ ಸಂಘಟನೆ ಸಂಘಗಳ ಜಂಟಿ ವೇದಿಕೆ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ಕೃಷಿ ಸಂಘಗಳ ಒಕ್ಕೂಟ, ಸಂಯುಕ್ತ ಕಿಸಾನ್ ಮೋರ್ಚಾ ಕೂಡ ಮುಷ್ಕರಕ್ಕೆ ಬೆಂಬಲ ಘೋಷಿಸಿದೆ.
ಜನವರಿ.9ರಂದು ದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಕಾರ್ಮಿಕರ ಸಭೆಯಲ್ಲಿ ಮುಷ್ಕರದ ಬಗ್ಗೆ ಹೋರಾಟ ರೂಪುರೇಷೆ ಹಾಗೂ ಮುಷ್ಕರದ ದಿನಾಂಕವನ್ನು ಅಧಿಕೃತವಾಗಿ ಪ್ರಕಟಿಸಲಾಗುವುದು ಎಂದು ಹೇಳಲಾಗಿದೆ.





