ನವದೆಹಲಿ: ನ್ಯಾಷನಲ್ ಹೆರಾಲ್ಡ್ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ, ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಕ್ರಿಮಿನಲ್ ಪಿತೂರಿ ಆರೋಪ ಹೊರಿಸಲಾಗಿದೆ.
ದೆಹಲಿ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗವು ಗಾಂಧಿ ಕುಟುಂಬ ಸೇರಿದಂತೆ ಆರು ಜನರ ವಿರುದ್ಧ ದಾಖಲಿಸಿದ ಹೊಸ ಪ್ರಥಮ ಮಾಹಿತಿ ವರದಿಯ (ಎಫ್‍ಐಆರ್) ಭಾಗವಾಗಿ ಈ ಆರೋಪಗಳು ದಾಖಲಾಗಿವೆ. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ದೆಹಲಿ ನ್ಯಾಯಾಲಯವು ತನ್ನ ತೀರ್ಪಿನ ಘೋಷಣೆಯನ್ನು ಡಿಸೆಂಬರ್.16ಕ್ಕೆ ಮುಂದೂಡಿದ ಒಂದು ದಿನದ ನಂತರ ಎಫ್‍ಐಆರ್ ದಾಖಲು ಮಾಡಲಾಗಿದೆ.
ಹೊಸ ಎಫ್‍ಐಆರ್‌ನಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಇಂಡಿಯನ್ ಓವರ್‍ಸೀಸ್ ಕಾಂಗ್ರೆಸ್ ಮುಖ್ಯಸ್ಥ ಸ್ಯಾಮ್ ಪಿತ್ರೋಡಾ ಮತ್ತು ಇತರ ಮೂವರ ಹೆಸರಿದೆ. ಮೂರು ಕಂಪನಿಗಳ ಮೇಲೆ ಕೂಡ ಆರೋಪಗಳು ದಾಖಲಾಗಿವೆ.
ಜಾರಿ ನಿರ್ದೇಶನಾಲಯ (ಇಡಿ) ತನ್ನ ತನಿಖಾ ವರದಿಯನ್ನು ದೆಹಲಿ ಪೊಲೀಸರಿಗೆ ಸಲ್ಲಿಸಿದ ನಂತರ, ಅಕ್ಟೋಬರ್.3ರಂದು ಇಬ್ಬರ ವಿರುದ್ಧ ಸೇರಿದಂತೆ ಒಟ್ಟು ಎಂಟು ಮಂದಿಯ ಮೇಲೂ ಹೊಸ ಎಫ್‍ಐಆರ್ ದಾಖಲಾಗಿದೆ. ಈ ಪ್ರಕರಣದಲ್ಲಿ ಮೂರು ಕಂಪನಿಗಳ ಆರೋಪಗಳು ಹೊರಬಿದ್ದಿವೆ.
ಎಫ್‍ಐಆರ್ ಪ್ರಕಾರ, 2,000 ಕೋಟಿಯ ಆಸ್ತಿಯನ್ನು ಹೊಂದಿರುವ ಕಾಂಗ್ರೆಸ್ ಒಡೆತನದ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ ಅನ್ನು ವಂಚನೆಯ ಮೂಲಕ ಗಾಂಧಿ ಕುಟುಂಬವು ತಮ್ಮ ಪಾಲಾಗಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಯಂಗ್ ಇಂಡಿಯನ್ ಎಂಬ ಕಂಪನಿಯ ಮೂಲಕ ಈ ಸ್ವಾಧೀನ ನಡೆದಿದೆ ಎಂದು ಎಫ್‍ಐಆರ್ ಹೇಳಿದೆ. ಗಾಂಧಿ ಕುಟುಂಬದವರು ಯಂಗ್ ಇಂಡಿಯನ್‍ನಲ್ಲಿ ಶೇ.76 ರಷ್ಟು ಪಾಲನ್ನು ಹೊಂದಿರುವುದರಿಂದ, ಏಕಪಕ್ಷೀಯ ಸ್ವಾಧೀನದ ಆರೋಪಗಳು ಗಂಭೀರವಾಗಿವೆ.





