ಹೊಸದಿಲ್ಲಿ : ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಸಲ್ಲಿಸಿದ ಆರೋಪಪಟ್ಟಿಯ ಹಿನ್ನೆಲೆಯಲ್ಲಿ ದಿಲ್ಲಿ ನ್ಯಾಯಾಲಯವು ಶನಿವಾರ ತನ್ನ ಆದೇಶವನ್ನು ಮುಂದೂಡಿದೆ.
ವಿಶೇಷ ನ್ಯಾಯಾಧೀಶ ವಿಶಾಲ್ ಗೋಗ್ನೆ ಅವರು ಆದೇಶದ ಘೋಷಣೆಯನ್ನು ಡಿಸೆಂಬರ್ ೧೬ಕ್ಕೆ ಮುಂದೂಡಿದ್ದಾರೆ. ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ, ಹಾಗೆಯೇ ಪಕ್ಷದ ದಿವಂಗತ ನಾಯಕರಾದ ಮೋತಿಲಾಲ್ ವೋರಾ ಮತ್ತು ಆಸ್ಕರ್ ಫರ್ನಾಂಡಿಸ್, ಸುಮನ್ ದುಬೆ, ಸ್ಯಾಮ್ ಪಿತ್ರೋಡಾ ಮತ್ತು ಖಾಸಗಿ ಕಂಪೆನಿ ಯಂಗ್ ಇಂಡಿಯನ್ ವಿರುದ್ಧ ಪಿತೂರಿ ಮತ್ತು ಹಣ ವರ್ಗಾವಣೆ ಆರೋಪ ಹೊರಿಸಿರುವ ಇಡಿ, ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಪ್ರಕಟಿಸುವ ಅಸೋಸಿಯೇಟೆಡ್ ಜರ್ನಲ್ ಲಿಮಿಟೆಡ್ (ಎಜೆಎಲ್) ಗೆ ಸೇರಿದ ಸುಮಾರು ೨,೦೦೦ ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಅವರು ಸಂಪಾದಿಸಿದ್ದಾರೆ ಎಂದು ಆರೋಪಿಸಿದೆ.
ಯಂಗ್ ಇಂಡಿಯನ್‌ನಲ್ಲಿ ಗಾಂಧಿ ಕುಟುಂಬವು ಬಹುಪಾಲು ಶೇ. ೭೬ ಷೇರುಗಳನ್ನು ಹೊಂದಿದ್ದು, ಇದು ೯೦ ಕೋಟಿ ರೂ.ಸಾಲಕ್ಕೆ ಬದಲಾಗಿ ಎಜೆಎಲ್‌ನ ಆಸ್ತಿಗಳನ್ನು ವಂಚನೆಯಿಂದ ಕಸಿದುಕೊಂಡಿದೆ ಎಂದು ಇಡಿ ಆರೋಪಿಸಿದೆ.
ಆರೋಪಪಟ್ಟಿಯಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ, ಪಿತ್ರೋಡಾ, ದುಬೆ, ಸುನಿಲ್ ಭಂಡಾರಿ, ಯಂಗ್ ಇಂಡಿಯನ್ ಮತ್ತು ಡಾಟೆಕ್ಸ್ ಮರ್ಚಂಡೈಸ್ ಪ್ರೈವೇಟ್ ಲಿಮಿಟೆಡ್ ಹೆಸರುಗಳಿವೆ.





