Mysore
22
overcast clouds
Light
Dark

ಬಡತನದಲ್ಲಿ ಬೆಳೆದ ನನ್ನಂತ ವ್ಯಕ್ತಿ ರಾಷ್ಟ್ರಸೇವೆ ಮಾಡಲು ಸಾಧ್ಯವಾದದ್ದು ಸಂವಿಧಾನದಿಂದ ಮಾತ್ರ: ನರೇಂದ್ರ ಮೋದಿ!

ನವದೆಹಲಿ: ಬಿಜೆಪಿ ನೇತೃತ್ವದ ಎನ್‌ಡಿಎ ಪಕ್ಷವು 18ನೇ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಅಧಿಕಾರದ ಗದ್ದುಗೆ ಹಿಡಿದ ಬೆನ್ನಲ್ಲೇ ಇಂದು (ಜೂನ್‌.7) ಪ್ರಧಾನಿ ನರೇಂದ್ರ ಮೋದಿ ಅವರು ಸಂಸದೀಯ ಸಭೆ ಆರಂಭಕ್ಕೂ ಮುನ್ನಾ ಸಂವಿಧಾನಕ್ಕೆ ನಮಸ್ಕರಿಸಿದರು.

ಸಭೆಗೂ ಮುನ್ನಾ ಸದನದಲ್ಲಿದ್ದ ಸಂವಿಧಾನಕ್ಕೆ ನಮಸ್ಕರಿಸಿದ ಮೋದಿ, ತಮ್ಮ ಮಿತ್ರ ಪಕ್ಷಗಳ ನಾಯಕರಾದ ಎಚ್‌.ಡಿ ಕುಮಾರಸ್ವಾಮಿ, ಚಂದ್ರಬಾಬು ನಾಯ್ಡು, ನಿತೀಶ್‌ ಕುಮಾರ್‌ ಜತೆಯಲ್ಲಿ ಮಾತನಾಡಿದರು. ಬಳಿಕ ಸರ್ಕಾರ ನಡೆಸಲು ಬಹುಮತ ಅಗತ್ಯ, ದೇಶವನ್ನು ನಡೆಸಲು ಒಮ್ಮತ ಅಗತ್ಯ ಎಂದು ಮೋದಿ ಹೇಳಿದರು.

ಬಿಜೆಪಿ ಸರ್ಕಾರ ಸಂವಿಧಾನವನ್ನು ಬದಲಿಸಲು ಹೊರಟಿದೆ ಎಂದು ಇಂಡಿಯಾ ಮಿತ್ರ ಕೂಟ ಚುನಾವಣಾ ಪ್ರಚಾರದ ವೇಳೆ ಹೇಳಿದ್ದರು. ಈ ಸಭೆಯಲ್ಲಿ ಮೋದಿ ಸಂವಿಧಾನಕ್ಕೆ ನಮಸ್ಕರಿಸುವ ಮೂಲಕ ತಮ್ಮ ಮೇಲೆ ಈ ಹಿಂದೆ ಇದ್ದ ಆರೋಪವನ್ನು ಸಲೀಸಾಗಿ ತಳ್ಳಿಹಾಕುವ ರೀತಿಯಲ್ಲಿ ಮೋದಿ ಸಂವಿಧಾನಕ್ಕೆ ನಮಸ್ಕರಿಸಿದ್ದಾರೆ.

ಇನ್ನು ಈ ಸಂಬಂಧ ಟ್ವೀಟ್‌ ಮಾಡಿರುವ ಮೋದಿ, “ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ನಮಗೆ ನೀಡಿದ ಭಾರತದ ಸಂವಿಧಾನದಲ್ಲಿ ಪ್ರತಿಪಾದಿಸಿರುವ ಉದಾತ್ತ ಮೌಲ್ಯಗಳನ್ನು ಎತ್ತಿಹಿಡಿಯಲು ನನ್ನ ಜೀವನದ ಪ್ರತಿ ಕ್ಷಣವೂ ಸಮರ್ಪಿತವಾಗಿದೆ. ಬಡತನದಲ್ಲಿ ಮತ್ತು ಹಿಂದುಳಿದ ಕುಟುಂಬದಲ್ಲಿ ಜನಿಸಿದ ನನ್ನಂತಹ ವ್ಯಕ್ತಿ ರಾಷ್ಟ್ರ ಸೇವೆ ಮಾಡಲು ಸಂವಿಧಾನದಿಂದ ಮಾತ್ರ ಸಾಧ್ಯ. ನಮ್ಮ ಸಂವಿಧಾನವು ಕೋಟ್ಯಂತರ ಜನರಿಗೆ ಭರವಸೆ, ಶಕ್ತಿ ಮತ್ತು ಘನತೆಯನ್ನು ನೀಡುತ್ತದೆ” ಎಂದು ಬರೆದುಕೊಂಡಿದ್ದಾರೆ.

ಅಡ್ವಾಣಿ ಭೇಟಿಯಾದ ಮೋದಿ:

ಸಂಸದೀಯ ನಾಯಕರಾಗಿ ನರೇಂದ್ರ ಮೋದಿ ಆಯ್ಕೆಯಾದ ಬಳಿಕ ಸತತ ಮೂರನೇ ಬಾರಿಗೆ ಸರ್ಕಾರ ರಚನೆಗೆ ಹಕ್ಕು ಮಂಡಿಸಲು ರಾಷ್ಟ್ರಪತಿ ಭವನಕ್ಕೆ ತೆರಳುವ ಮುನ್ನಾ ತಮ್ಮ ರಾಜಕೀಯ ಗುರುಗಳಾದ ಎಲ್‌.ಕೆ ಅಡ್ವಾಣಿ ಅವರನ್ನು ಭೇಟಿಯಾಗಿದ್ದಾರೆ. ಇವರ ಭೇಟಿಯ ಬಳಿಕ ಮುರಳಿ ಮನೋಹರ ಜೋಷಿ ಹಾಗೂ ಮಾಜಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್ ಅವರನ್ನು ಸಹಾ ಮೋದಿ ಭೇಟಿಯಾದರು.