ಮುಂಬೈ : 2006 ರ ಮುಂಬೈ ರೈಲು ಸ್ಛೋಟ ಪ್ರಕರಣದಲ್ಲಿ ಶಿಕ್ಷೆಗೊಳಗಾದ 12 ಜನರನ್ನು ಬಾಂಬೆ ಉಚ್ಚ ನ್ಯಾಯಾಲಯ ಸೋಮವಾರ ಖುಲಾಸೆಗೊಳಿಸಿ ಮಹತ್ವದ ತೀರ್ಪು ನೀಡಿದೆ.
12 ಜನರಲ್ಲಿ ಐವರು ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದರು. ರೈಲು ಬಾಂಬ್ ಸ್ಛೋಟದಲ್ಲಿ 187 ಜನರು ಸಾವನ್ನಪ್ಪಿದರೆ, 829 ಜನರು ಗಾಯಗೊಂಡಿದ್ದರು. ನ್ಯಾಯಮೂರ್ತಿ ಅನಿಲ್ ಕಿಲೋರ್ ಮತ್ತು ನ್ಯಾಯಮೂರ್ತಿ ಶ್ಯಾಮ್ ಸಿ ಚಂದಕ್ ಅವರಿದ್ದ ವಿಭಾಗೀಯ ಪೀಠ ತೀರ್ಪು ಪ್ರಕಟಿಸಿದ್ದು, ಬೇರೆ ಯಾವುದೇ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸದಿದ್ದರೆ, ಅವರನ್ನು ತಕ್ಷಣವೇ ಜೈಲಿನಿಂದ ಬಿಡುಗಡೆ ಮಾಡಬೇಕೆಂದು ಹೇಳಿದೆ.
ಆರೋಪಿಗಳ ವಿರುದ್ಧದ ಪ್ರಕರಣವನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ಸಂಪೂರ್ಣವಾಗಿ ವಿಫಲವಾಗಿದೆ. ಆರೋಪಿಗಳು ಅಪರಾಧ ಮಾಡಿದ್ದಾರೆ ಎಂದು ನಂಬುವುದು ಕಷ್ಟ. ಆದ್ದರಿಂದ ಅವರ ಅಪರಾಧವನ್ನು ರದ್ದುಗೊಳಿಸಲಾಗಿದೆ ಎಂದು ಹೈಕೋರ್ಟ್ ತನ್ನ ತೀರ್ಪೀನಲ್ಲಿ ಹೇಳಿದೆ.
ಜುಲೈ 11, 2006 ರಂದು ಸಂಜೆ 6.25ರಿಂದ ಸಂಜೆ 6.28 ರ ನಡುವೆ ಏಳು ಅತ್ಯಾಧುನಿಕ, ಸ್ಛೋಟಕ ಸಾಧನಗಳು ಪಶ್ಚಿಮ ಮಾರ್ಗದಲ್ಲಿ 7 ಉಪನಗರ ರೈಲುಗಳ ಪ್ರಥಮ ದರ್ಜೆ ಪುರುಷರ ವಿಭಾಗಗಳನ್ನು ಭೇದಿಸಿ 187 ಜನರನ್ನು ಬಲಿ ತೆಗೆದುಕೊಂಡಿದ್ದವು. ಘಟನೆಯಲ್ಲಿ 829 ಜನರು ಗಾಯಗೊಂಡಿದ್ದರು.
ದಾಳಿಕೋರರು ದೂರದ ಉಪನಗರಗಳಿಗೆ ಹೋಗುತ್ತಿದ್ದ ಜನದಟ್ಟಣೆಯ ರೈಲುಗಳನ್ನು ಗುರಿಯಾಗಿಸಿಕೊಂಡಿದ್ದರು. ಮಾತುಂಗಾ ಮತ್ತು ಮೀರಾ ರಸ್ತೆ ರೈಲು ನಿಲ್ದಾಣಗಳ ನಡುವೆ ಚಲಿಸುವ ರೈಲುಗಳಲ್ಲಿ ಸ್ಛೋಟಗಳು ನಡೆದಿದ್ದವು.





