ಹೊಸದಿಲ್ಲಿ: ಕೇಂದ್ರ ಸರ್ಕಾರವು ದೇಶದಲ್ಲಿ ಉದ್ಯಮಶೀಲತೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ಮುದ್ರಾ ಯೋಜನೆಯಡಿ ನೀಡುವ ಸಾಲದ ಮಿತಿಯನ್ನು ರೂ.20 ಲಕ್ಷಕ್ಕೆ ಹೆಚ್ಚಿಸಿದೆ.
ಕಾರ್ಪೊರೇಟ್ ಅಲ್ಲದೆ ಕೃಷಿಯೇತರ ಸಣ್ಣ ಮತ್ತು ಅತಿ ಸಣ್ಣ ಉದ್ಯಮಗಳಿಗೆ ಆರ್ಥಿಕ ನೆರವು ನೀಡುವುದು ಈ ಯೋಜನೆಯ ಮೂಲ ಉದ್ದೇಶವಾಗಿದೆ ಎಂದು ವಿತ್ತ ಸಚಿವಾಲಯವು ತಿಳಿಸಿದೆ. ಈ ಸಂಬಂಧ ಗುರುವಾರ ಅಧಿಸೂಚನೆಯನ್ನು ಹೊರಡಿಸಲಾಗಿದೆ.
ಜುಲೈನಲ್ಲಿ ಮಂಡನೆಯಾಗಿದ್ದ 2024-25 ನೇ ಸಾಲಿನ ಬಜೆಟ್‌ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಸಾಲದ ಮಿತಿ ಏರಿಕೆ ಬಗ್ಗೆ ಪ್ರಸ್ತಾಪಿಸಿದರು. ತರುಣ್ ವರ್ಗದಡಿ ರೂ 10 ಲಕ್ಷ ಸಾಲ ಪಡೆದು, ಸಕಾಲದಲ್ಲಿ ಮರುಪಾವತಿ ಮಾಡಿದವರಿಗಷ್ಟೆ ಈ ಸೌಲಭ್ಯ ಸಿಗಲಿದೆ ಎಂದು ಅವರು ಹೇಳಿದ್ದರು.
ತರುಣ್ ಪ್ಲಸ್ ವಿಭಾಗದಲ್ಲಿ 10 ಲಕ್ಷದಿಂದ 20 ಲಕ್ಷದವರೆಗೆ ಸಾಲ ಸೌಲಭ್ಯ ಸಿಗಲಿದೆ. ಈ ಕ್ರಮವು ದೇಶದಲ್ಲಿ ಉದ್ಯಮಶೀಲ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ಬದ್ಧವಾಗಿದೆ ಎಂದು ಹೇಳಿದೆ.