ಬೆಂಗಳೂರಿನ ಯಶವಂತಪುರ, ಎಸ್‌ಎಂವಿಟಿ, ಕೆ.ಆರ್.ಪುರಂ, ರೈಲ್ವೆ ನಿಲ್ದಾಣಗಳಿಂದ ಚಾಮರಾಜನಗರ, ಮೈಸೂರು, ಶಿವಮೊಗ್ಗ, ಕಡೂರು, ತಾಳಗುಪ್ಪ , ಹಾಸನ , ಉಡುಪಿ, ಮಂಗಳೂರು, ಬಳ್ಳಾರಿ, ಬೀದರ್, ಬೆಳಗಾವಿ, ಧಾರವಾಡ ಇನ್ನಿತರ ಭಾಗಗಳಿಗೆ ತೆರಳುವ ರೈಲುಗಾಡಿಗಳಲ್ಲಿ ದಿನ ನಿತ್ಯ ಪ್ರಯಾಣಿಕರ ಸಂಖ್ಯೆ ಏರಿಕೆಯಾಗುತ್ತಿದೆ.
ಶನಿವಾರ ಮತ್ತು ಭಾನುವಾರ ಕಾಯ್ದಿರಿಸದ ಬೋಗಿಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುತ್ತದೆ. ಜನರಲ್ ಬೋಗಿಗಳಲ್ಲಿ ನೂಕು ನುಗ್ಗಲಿನಲ್ಲಿ, ಮಹಿಳೆಯರು ಸೇರಿದಂತೆ ಗರ್ಭಿಣಿಯರೂ ಕೂಡ ಸೀಟು ಸಿಗದೆ ಪರದಾಡುವಂತಾಗುತ್ತದೆ. ಬಸ್ಸಿನಲ್ಲಿ ಪ್ರಯಾಣಿಸಲು ಸಾಧ್ಯವಾಗದ ಹಿರಿಯ ನಾಗರಿಕರು ರೈಲಿನಲ್ಲಿ ಪ್ರಯಾಣ ಮಾಡುವುದಕ್ಕೆ ಬಂದರೆ, ಜನರಲ್ ಬೋಗಿಗಳಲ್ಲಿ ಸೀಟು ಸಿಗದೇ ತೊಂದರೆ ಅನುಭವಿಸುತ್ತಿದ್ದಾರೆ.
ಜನರಲ್ ಬೋಗಿಯಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾದಾಗ ದ್ವಿತೀಯ ದರ್ಜೆ ಪ್ರಯಾಣದ ಟಿಕೆಟ್ ಪಡೆದವರು ಸ್ಲೀಪರ್ ಬೋಗಿಯಲ್ಲಿ ಪ್ರಯಾಣ ಮಾಡಲು ಮುಂದಾಗಿ ಟಿಕೆಟ್ ಕಲೆಕ್ಟರ್‌ಗಳಿಗೆ ಸಿಕ್ಕಿ ಬಿದ್ದು ದಂಡ ಕಟುವಂತಾಗಿದೆ. ರೈಲ್ವೆ ಖಾತೆ ರಾಜ್ಯ ಸಚಿವರಾಗಿರುವ ವಿ. ಸೋಮಣ್ಣ ಅವರು ಕೂಡಲೇ ಯಶವಂತಪುರ, ಎಸ್‌ಎಂವಿಟಿ, ಕೆ.ಆರ್ .ಪುರಂ, ರೈಲ್ವೆ ನಿಲ್ದಾಣಗಳಿಂದ ಸಂಚರಿಸುವ ರೈಲುಗಳಿಗೆ ಹೆಚ್ಚುವರಿಯಾಗಿ ಜನರಲ್ ಬೋಗಿಗಳನ್ನು ಅಳವಡಿಸಬೇಕು, ರೈಲುಗಳ ಜನರಲ್ ಬೋಗಿಗಳಲ್ಲಿ ಹಿರಿಯ ನಾಗರಿಕರಿಗೆ ಸೀಟು ಕಾಯ್ದಿರಿಸಬೇಕು ಹಾಗೂ ವಾರಾಂತ್ಯದಲ್ಲಿ ಮತ್ತು ರಜಾದಿನಗಳಲ್ಲಿ ಹೆಚ್ಚುವರಿಯಾಗಿ ರೈಲು ಸಂಚಾರ ವ್ಯವಸ್ಥೆ ಮಾಡುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕಾಗಿದೆ.
– ನಾಗೇಶ್, ಮಾನಸಗಂಗೋತ್ರಿ, ಮೈಸೂರು


