Mysore
20
broken clouds

Social Media

ಮಂಗಳವಾರ, 11 ಫೆಬ್ರವರಿ 2025
Light
Dark

ಮತ್ತೆ ಮನೀಶ್‌ ಸಿಸೋಡಿಯಾ ಡಿಸಿಎಂ: ದೆಹಲಿ ಮಾಜಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಘೋಷಣೆ

 

ನವದೆಹಲಿ: ದೆಹಲಿಯಲ್ಲಿ ಮುಂದಿನ ತಿಂಗಳು ವಿಧಾನಸಭೆ ಚುನಾವಣೆಯಲ್ಲಿ ಎಎಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ಇನ್ನೊಂದು ಅವಧಿಗೆ ಮನೀಶ್‌ ಸಿಸೋಡಿಯಾ ಅವರು ಉಪಮುಖ್ಯಮಂತ್ರಿಯಾಗಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಮತ್ತು ಎಎಪಿ ಸಂಚಾಲಕ ಅರವಿಂದ್‌ ಕೇಜ್ರಿವಾಲ್‌ ಹೇಳಿದ್ದಾರೆ.

ಈ ಕುರಿತು ಜಂಗ್‌ಪುರ ಕ್ಷೇತ್ರದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಮನೀಶ್‌ ಸಿಸೋಡಿಯಾ ಮತ್ತೊಮ್ಮೆ ಡಿಸಿಎಂ ಪಟ್ಟ ಆಲಂಕರಿಸಲಿದ್ದಾರೆ. ಅವರ ಜೊತೆಯಲ್ಲಿ ನೀವೂ ಉಪಮುಖ್ಯಮಂತ್ರಿಗಳಾಗಿರುತ್ತೀರಿ. ಹೀಗಾಗಿ ಸಿಸೋಡಿಯಾ ಅವರನ್ನು ನೀವು ಗೆಲ್ಲಿಸಿ ಎಂದು ಮನವಿ ಮಾಡಿದರು.

ಹಾಲಿ ಎಎಪಿ ಸರ್ಕಾರದ ಅವಧಿಯಲ್ಲಿ ಮನೀಶ್‌ ಸಿಸೋಡಿಯಾ ಅವರನ್ನು ಮಾರ್ಚ್‌.2023ರಲ್ಲಿ ದೆಹಲಿ ಮದ್ಯದ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಯಿತು. ನಂತರ ಅವರು ರಾಜೀನಾಮೆ ನೀಡಿದರು. ಆದರೆ ಈ ವಿಧಾನಸಭೆ ಚುನಾವಣೆಯಲ್ಲಿ ಜಂಗ್‌ಪುರ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ ಎಂದರು.

ಮನೀಶ್‌ ಸಿಸೋಡಿಯಾ ಅವರ ಕೊಡುಗೆ ಬಗ್ಗೆ ಮಾತನಾಡಿ, ನಾನು ಮತ್ತು ಸಿಸೋಡಿಯಾ ಒಟ್ಟಾಗಿ ನಿಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಸರ್ಕಾರಿ ಶಾಲೆಗಳನ್ನು ಅಭಿವೃದ್ದಿ ಮಾಡಿದ್ದೇವೆ. ಮುಂದಿನ ಅವಧಿಯಲ್ಲೂ ಅಭಿವೃದ್ದಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇವೆ. ಆದರೆ ಬಿಜೆಪಿ ಶಾಸಕರು ಇದಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಕಳೆದ ಬಾರಿ ಎಂಟು ವಿಧಾನಸಭೆ ಕ್ಷೇತ್ರಗಳಲ್ಲಿ ಗೆದ್ದಿದ್ದ ಬಿಜೆಪಿ ಶಾಸಕರು ಅವರವರ ಕ್ಷೇತ್ರಗಳಲ್ಲಿ ಯಾವುದೇ ಕಾಮಗಾರಿ ನಡೆಯಲು ಬಿಡದೇ ಆ ಕ್ಷೇತ್ರವನ್ನು ನರಕವಾಗಿಸಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಅಂತಹ ತಪ್ಪು ಮಾಡಬೇಡಿ ಎಂದು ಸಲಹೆ ನೀಡಿದರು.

ಎಎಪಿ ಸರ್ಕಾರ, ಸರ್ಕಾರಿ ಶಾಲೆಗಳನ್ನು ನಿರ್ಮಿಸಿ ಜನರ ಪರವಾದ ಕೆಲಸಗಳನ್ನು ಮಾಡುತ್ತಿದೆ. ಆದರೆ ಬಿಜೆಪಿ ಅವುಗಳನ್ನು ನಾಶ ಮಾಡುವಲ್ಲಿ ತೊಡಗಿದೆ. ಜಂಗ್‌ಪುರದಲ್ಲಿ ಆಪ್‌ ಗೆದ್ದರೆ ಇಲ್ಲಿನ ಜನರ ಕೆಲಸವನ್ನು ತಡೆಯುವ ಧೈರ್ಯ ಯಾರಿಗೂ ಇಲ್ಲ ಎಂದು ಹೇಳಿದರು.

Tags: