ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಜಯಭೇರಿ ಬಾರಿಸಿದೆ. ಈ ಮೂಲಕ ಕಾಂಗ್ರೆಸ್ ನೇತೃತ್ವದ ಮಹಾವಿಕಾಸ್ ಆಘಾಡಿ ಮೈತ್ರಿಕೂಟಕ್ಕೆ ಮರ್ಮಾಘಾತ ತಂದುಕೊಟ್ಟಿದೆ.
ಹೀನಾಯ ಸೋಲು ಕಂಡಿರುವ ಮಹಾವಿಕಾಸ್ ಆಘಾಡಿಗೆ ಚುನಾವಣೆ ಫಲಿತಾಂಶದಿಂದ ತೀವ್ರ ಬೇಸರವಾಗಿದೆ. ಮಹಾ ವಿಕಾಸ್ ಆಘಾಡಿ ಯಾವುದೇ ಪಕ್ಷವೂ ಅಧಿಕೃತ ವಿಪಕ್ಷ ಸ್ಥಾನಮಾನ ಗಳಿಸುವಷ್ಟು ಸ್ಥಾನಗಳನ್ನು ಪಡೆದಿಲ್ಲ.
ಮಹಾರಾಷ್ಟ್ರ ವಿಧಾನಸಭೆ ಒಂದು ಪಕ್ಷಕ್ಕೆ ಅಧಿಕೃತ ವಿಪಕ್ಷ ಸ್ಥಾನ ಗಳಿಸಲು ಕನಿಷ್ಠ 29 ಸ್ಥಾನಗಳನ್ನು ಗೆದ್ದಿರಬೇಕು. ಇಂದಿನ ಪರಿಸ್ಥಿತಿಯಲ್ಲಿ ಉದ್ಧವ್ ಠಾಕ್ರೆ ಬಣ 21 ಸ್ಥಾನ, ಕಾಂಗ್ರೆಸ್ 21 ಸ್ಥಾನ ಮತ್ತು ಶರದ್ ಪವಾರ್ ಎನ್‌ಸಿಪಿ ಪಕ್ಷ 9 ಸ್ಥಾನಗಳನ್ನು ಮಾತ್ರ ಪಡೆದುಕೊಂಡಿದೆ. ಹೀಗಾಗಿ ಮಹಾ ವಿಕಾಸ್ ಆಘಾಡಿಯ ಯಾವುದೇ ಪಕ್ಷವೂ ಅಧಿಕೃತ ವಿಪಕ್ಷ ಸ್ಥಾನಕ್ಕೆ ಅರ್ಹತೆ ಪಡೆಯದೇ ಇರುವುದು ಮೈತ್ರಿಕೂಟಕ್ಕೆ ನುಂಗಲಾರದ ತುತ್ತಾಗಿದೆ.
ಇಷ್ಟು ಮಾತ್ರವಲ್ಲದೇ ಭಾರೀ ಪ್ರಮಾಣದಲ್ಲಿ ಸ್ಥಾನಗಳ ಕುಸಿತದಿಂದಾಗಿ ಮಹಾ ವಿಕಾಸ್ ಆಘಾಡಿ ಮೈತ್ರಿಕೂಟಕ್ಕೆ ಮುಂಬರುವ ರಾಜ್ಯಸಭೆ ಚುನಾವಣೆಯೂ ಕಬ್ಬಿಣದ ಕಡಲೆಯಾಗುವ ಎಲ್ಲಾ ಲಕ್ಷಣಗಳಿವೆ ಎನ್ನಲಾಗಿದೆ. ಪಕ್ಷಗಳು ತಮ್ಮ ತಮ್ಮ ರಾಜ್ಯಸಭೆ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ಸಾಮರ್ಥ್ಯವನ್ನು ಕೂಡ ಕಳೆದುಕೊಂಡಿವೆ ಎಂಬ ಮಾಹಿತಿ ಲಭ್ಯವಾಗಿದೆ.