Mysore
21
clear sky

Social Media

ಗುರುವಾರ, 29 ಜನವರಿ 2026
Light
Dark

ಮಹದಾಯಿ ಯೋಜನೆ-ಗೋವಾ ಸಿಎಂ ನಡೆ ಸರಿಯಿಲ್ಲ : ಸಿದ್ದರಾಮಯ್ಯ

ಹೊಸದಿಲ್ಲಿ : ಮಹದಾಯಿ ಯೋಜನೆ ವಿಚಾರ ನ್ಯಾಯಮಂಡಳಿಯಲ್ಲಿ ಈಗಾಗಲೇ ಇತ್ಯರ್ಥವಾಗಿದ್ದರೂ, ಗೋವಾ ಸಿಎಂ ನ ಹೇಳಿಕೆ ಸರಿಯಾದುದಲ್ಲ. ಮಹದಾಯಿ ಯೋಜನೆಗೆ ಪರಿಸರ ಒಪ್ಪಿಗೆ ಸಿಗಬೇಕಾಗಿದೆಯೇ ಹೊರತು, ಉಚ್ಛ ನ್ಯಾಯಾಲಯದಲ್ಲಿಯೂ ಈ ವಿಚಾರ ಇತ್ಯರ್ಥವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

 

ಶುಕ್ರವಾರ ಹೊಸದಿಲ್ಲಿಯ ಕರ್ನಾಟಕ ಭವನದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು, ಗೋವಾ ನ್ಯಾಯಾಲಯದ ಮೊರೆ ಹೋಗಲು ನಮ್ಮ ಅಭ್ಯಂತರವಿಲ್ಲ. ನ್ಯಾಯಮಂಡಳಿ ಈಗಾಗಲೇ ನಿರ್ಧಾರ ಮಾಡಿದ್ದು, ಸುಪ್ರೀಂ ಕೋರ್ಟ್ ಸಹ ಎಲ್ಲಾ ವಿವಾದಗಳನ್ನು ಬಗೆಹರಿಸಿದೆ. ಗೋವಾ ಮುಖ್ಯಮಂತ್ರಿಗಳು ಹೇಳಿರುವ ವಿಚಾರವನ್ನು ಕೇಂದ್ರ ಸರ್ಕಾರದ ಗಮನಕ್ಕೆ ಏಕೆ ತರಬೇಕೆಂದು ಪ್ರಶ್ನಿಸಿದ ಮುಖ್ಯಮಂತ್ರಿಗಳು, ಗೋವಾ ಮುಖ್ಯಮಂತ್ರಿಗಳಿಗೆ ನ್ಯಾಯಾಲಯದ ಮೊರೆ ಹೋಗಲು ಯಾವ ಹಕ್ಕೂ ಇಲ್ಲ(ಲೋಕಸ್ ಸ್ಯಾಂಡಿ) ಎಂದರು.

 

ಅರಣ್ಯ ಹಾಗೂ ಪರಿಸರ ಇಲಾಖೆಯು ಕೇಂದ್ರ ಸರ್ಕಾರದಡಿಯಲ್ಲಿದ್ದು, ಕೇಂದ್ರ ಸರ್ಕಾರವು ಈ ಬಗ್ಗೆ ತೀರುವಳಿ ನೀಡಬೇಕಿದೆ ಎಂದರು.

 

ಬಿಜೆಪಿಯವರು ಸಂವಿಧಾನವನ್ನು ಯಾವಾಗ ಗೌರವಿಸಿದ್ದಾರೆ?

ಇಂದಿನ ಎಐಸಿಸಿ ಒಬಿಸಿ ಸಭೆ ಸಭೆಯ ಬಗ್ಗೆ ಬಿಜೆಪಿ ಮಾಡಿರುವ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು ಬಿಜೆಪಿಯವರು ಸಾಮಾಜಿಕ ನ್ಯಾಯದ ಪರವಾಗಿ ಎಂದೂ ಇರಲಿಲ್ಲ. ಮಂಡಲ್ ಆಯೋಗದ ವರದಿಯನ್ನು ಬಿಜೆಪಿ ವಿರೋಧಿಸಿತ್ತು. ಮಂಡಲ್ ಗೆ ಪ್ರತಿಯಾಗಿ ಕಮಂಡಲ ಯಾತ್ರೆ ಶುರು ಮಾಡಿದ್ದು ಯಾರು? ಆ ಸಂದರ್ಭದಲ್ಲಿ 200 ಆತ್ಮಹತ್ಯೆಗಳಿಗೆ ಪ್ರಚೋದನೆ ಕೊಟ್ಟವರು ಯಾರು?1993 ನಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿಯನ್ನು ಜಾರಿಗೆ ತಂದಾಗ ಅದನ್ನು ವಿರೋಧಿಸಿದ್ದು ಯಾರು? 74ನೇ ತಿದ್ದುಪಡಿಯನ್ನು ವಿರೋಧಿಸಿದವರು ಯಾರು? ಬಿಜೆಪಿಯವರು ಸಂವಿಧಾನವನ್ನು ಯಾವಾಗ ಗೌರವಿಸಿದ್ದಾರೆ? ಸಂವಿಧಾನ ಜಾರಿಗೆ ಬಂದಾಗ ಆರ್ಗನೈಸರ್ ಪತ್ರಿಕೆಯಲ್ಲಿ ಸಾವರ್ಕರ್ , ಗೋಲ್ವಾಲ್ಕರ್ ಅವರ ಹೇಳಿಕೆಗಳನ್ನು ಗಮನಿಸಬೇಕು. ಅಂಬೇಡ್ಕರ್ ಅವರನ್ನು ಕಾಂಗ್ರೆಸ್ನವರು ಸೋಲಿಸಿದರು ಎಂದು ಬಿಜೆಪಿಯವರು ಕೇವಲ ಸುಳ್ಳನ್ನೇ ಹೇಳುವುದು. ಅಂಬೇಡ್ಕರ್ ಅವರು ತಮ್ಮ ಸ್ನೇಹಿತರಿಗೆ ಬರೆದ ಪತ್ರದಲ್ಲಿ ನನ್ನನ್ನು ಸೋಲಿಸಿದವರು ಹಿಂದೂ ಮಹಾಸಭಾದ ಅಧ್ಯಕ್ಷ ಸಾವರ್ಕರ್ ಹಾಗೂ ಕಮ್ಯುನಿಸ್ಟ್ ಪಕ್ಷದ ರಂಗ ಎಂದು ಬರೆದಿದ್ದಾರೆ ಎಂದರು.

 

ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕ: ಪಕ್ಷದ ವರಿಷ್ಠರಿಂದ ಅಂತಿಮ ನಿರ್ಧಾರ

ಕರ್ನಾಟಕದ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲ ಅವರೊಂದಿಗೆ ನೆನ್ನೆ ನಡೆದ ಸಭೆಯಲ್ಲಿ ನಿಗಮ ಮಂಡಳಿಗಳ ಅಧ್ಯಕ್ಷರ ಪಟ್ಟಿ ತಯಾರಾಗಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು ನಾನು ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಭಿಪ್ರಾಯವನ್ನು ನೀಡಿದ್ದೇವೆ. ಅಂತಿಮವಾಗಿ ಹೈಕಮಾಂಡ್ ನಿರ್ಧಾರವನ್ನು ತೆಗೆದುಕೊಳ್ಳಲಿದೆ ಎಂದರು.

 

ಶೀಘ್ರದಲ್ಲಿ ವಿಧಾನಪರಿಷತ್ತಿಗೆ ನಾಮ ನಿರ್ದೇಶನ

ವಿಧಾನ ಪರಿಷತ್ತಿಗೆ ನಾಮನಿರ್ದೇಶನ ವಿಧಾನ ಮಂಡಲದ ಅಧಿವೇಶನಕ್ಕೆ ಮುನ್ನವೇ ಆಗಬಹುದೇ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ ಆಗಬಹುದು ಎಂದು ಸಕಾರಾತ್ಮಕವಾಗಿ ಮುಖ್ಯಮಂತ್ರಿಗಳು ಉತ್ತರಿಸಿದರು.

 

ಕಾಂಗ್ರೆಸ್ ಎಂದಿಗೂ ಎಸ್ ಡಿ.ಪಿ.ಐ ನ್ನು ಬೆಂಬಲಿಸಿಲ್ಲ

ಎಸ್ ಡಿ. ಪಿ.ಐ ಗೆ ಕಾಂಗ್ರೆಸ್ ಬೆಂಬಲ ನೀಡುತ್ತಿದೆ ಎಂದು ಬಿಜೆಪಿ ಮಾಡಿರುವ ಆರೋಪದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು ಈ ಆರೋಪವನ್ನು ತಳ್ಳಿಹಾಕುತ್ತಾ ಕಾಂಗ್ರೆಸ್ ಎಂದಿಗೂ ಎಸ್ ಡಿ.ಪಿ.ಐ ನ್ನು ಬೆಂಬಲಿಸಿಲ್ಲ ಎಂದರು.

 

ರಸಗೊಬ್ಬರ ಪೂರೈಸಲು ನಡ್ಡಾ ಅವರಿಗೆ ಪತ್ರ

ಭಾರತ ಸರ್ಕಾರವು ಯೂರಿಯಾ ಮತ್ತಿತರ ರಸಗೊಬ್ಬರಗಳನ್ನು ಎಲ್ಲಾ ರಾಜ್ಯಗಳಿಗೆ ಸರಬರಾಜು ಮಾಡಬೇಕು. ಈ ವರ್ಷ ಭಾರತ ಸರ್ಕಾರವು ಸರಬರಾಜು ಮಾಡಿರುವ ರಸಗೊಬ್ಬರವು ಸಾಕಾಗುತ್ತಿಲ್ಲ. ಏಕೆಂದರೆ ರಾಜ್ಯದಲ್ಲಿ ಮುಂಗಾರು ಅವಧಿಗೂ ಮುನ್ನವೇ ಪ್ರಾರಂಭವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಬಿತ್ತನೆ ಈ ವರ್ಷ ಹೆಚ್ಚಾಗಿದೆ. ಜಲಾನಯನ ಪ್ರದೇಶಕ್ಕೆ ನೀರನ್ನು ಈಗಾಗಲೇ ಹಾಯಿಸಲಾಗಿದೆ. ಹಾಗಾಗಿ ರೈತರು ಹೆಚ್ಚು ರಸಗೊಬ್ಬರವನ್ನು ಬಳಸುತ್ತಿದ್ದಾರೆ. ಹಾಗೆಂದು ನಮ್ಮ ಬಳಿ ರಸಗೊಬ್ಬರವಿಲ್ಲ ಎಂದನೇನಲ್ಲ. ಆದರೆ ರಾಜ್ಯಕ್ಕೆ ಹೆಚ್ಚಿನ ರಸಗೊಬ್ಬರದ ಅಗತ್ಯವಿದೆ. ಸರ್ಕಾರದ ಬಳಿ ರಸಗೊಬ್ಬರವಿಲ್ಲ ಎಂಬ ತಪ್ಪು ಕಲ್ಪನೆ ರೈತರಲ್ಲಿ ಮೂಡಿದ್ದು, ಚಳವಳಿ ಪ್ರಾರಂಭಿಸಿದ್ದಾರೆ. ಯೂರಿಯಾ ಮತ್ತಿತರ ರಾಸಾಯನಿಕ ರಸಗೊಬ್ಬರ ಲಭ್ಯವಿದ್ದು, ಹೆಚ್ಚಿನ ಗೊಬ್ಬರದ ಅವಶ್ಯಕತೆ ಇದೆ ಎಂದು ಜಿ. ಪಿ.ನಡ್ಡಾ ಅವರಿಗೆ ಮುಖ್ಯಮಂತ್ರಿಗಳು ಪತ್ರ ಬರೆದಿರುವುದಾಗಿ ವಿವರಿಸಿದರು.

 

ಮಾಹಿತಿ ಇಲ್ಲ

ರಾಜ್ಯದಲ್ಲಿ ಜನೌಷಧಿ ಕೇಂದ್ರಗಳನ್ನು ಮುಚ್ಚುವ ಸರ್ಕಾರದ ನಿರ್ಧಾರದ ಬಗ್ಗೆ ಸಂಸತ್ತಿನಲ್ಲಿ ಪ್ರಸ್ತಾಪವಾಗಿದ್ದು, ನಿರ್ಧಾರವನ್ನು ಪರಿಪರಿಶೀಲಿಸಬೇಕೆಂದು ಜಿ.ಪಿ . ನಡ್ಡಾ ಅವರ ಕಚೇರಿಯಿಂದ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಬಗ್ಗೆ ಮಾತನಾಡಿ ಈ ಬಗ್ಗೆ ಮಾಹಿತಿ ಇಲ್ಲ ಎಂದರು.

 

ನ್ಯಾ.ಕುನ್ಹಾ ಅವರ ವರದಿಯನುಸಾರ ಶಿಸ್ತಿನ ಕ್ರಮವನ್ನು ಜರುಗಿಸಿದೆ

ಆರ್.ಸಿ.ಬಿ ವಿಜಯೋತ್ಸವದ ಸಂದರ್ಭದಲ್ಲಿ ಕಾಲ್ತುಳಿತದ ಪ್ರಕರಣದ ನ್ಯಾಯಮೂರ್ತಿ ಕುನ್ಹಾ ಅವರ ವರದಿಯ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು, ನ್ಯಾ.ಮೈಕಲ್ ಕುನ್ಹಾ ಅವರ ವರದಿಯನ್ನು ಸರ್ಕಾರ ಅಂಗೀಕರಿಸಿದೆ. ಕೆ.ಎಸ್.ಸಿ.ಎ ಹಾಗೂ ಡಿಎನ್ಎ, ಆರ್.ಸಿ.ಬಿ ವಿರುದ್ಧ ಕಾನೂನಿನ ಕ್ರಮ ಜರುಗಿಸಲಾಗಿದೆ. ಪೊಲೀಸ್ ಆಯುಕ್ತರು, ಹೆಚ್ಚುವರಿ ಪೊಲೀಸ್ ಆಯುಕ್ತರು, ಎಸ್. ಪಿ ಹಾಗೂ ಎಸಿಪಿ ಹಾಗು ಪೊಲೀಸ್ ಇನ್ಸ್ಪೆಕ್ಟರ್ ಸೇರಿದಂತೆ ಹಲವರನ್ನು ಅಮಾನತು ಮಾಡಲಾಗಿದೆ. ಇವರ ವಿರುದ್ಧ ಇಲಾಖಾ ವಿಚಾರಣೆಯನ್ನು ನಡೆಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ನ್ಯಾ.ಮೈಕಲ್ ಕುನ್ಹಾ ಅವರ ವರದಿಯನುಸಾರ ಸರ್ಕಾರವು ಶಿಸ್ತಿನ ಕ್ರಮವನ್ನು ಜರುಗಿಸಿದೆ ಎಂದರು.

 

ಅಧಿಕಾರಿಗಳ ಜಟಾಪಟಿ ಕುರಿತು ಪರಿಶೀಲನೆ

ಕರ್ನಾಟಕ ಭವನದಲ್ಲಿ ಅಧಿಕಾರಿಗಳು ಜಟಾಪಟಿ ಮಾಡಿಕೊಂಡು ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು ಈ ಬಗ್ಗೆ ಪರಿಶೀಲಿಸುವುದಾಗಿ ತಿಳಿಸಿದರು.

 

ಆಗಸ್ಟ್ ನಲ್ಲಿ ರಾಹುಲ್ ಗಾಂಧಿ ಜೊತೆ ಭೇಟಿ

ಆಗಸ್ಟ್ 1 ಮತ್ತು 2 ರಂದು ಎಐಸಿಸಿ ಕಾನೂನು ಕೋಶದ ವಿಚಾರ ಸಂಕಿರಣ ನಡೆಯಲಿದ್ದು, ಆ ಸಂದರ್ಭದಲ್ಲಿ ರಾಹುಲ್ ಗಾಂಧಿಯವರನ್ನು ಭೇಟಿ ಮಾಡುತ್ತೇನೆ ಎಂದರು.

Tags:
error: Content is protected !!