ಭೋಪಾಲ್ : ಬಾಸ್ ಜೊತೆ ಅಕ್ರಮ ಸಂಬಂಧವಿರಬಹುದು ಎಂದು ಶಂಕಿಸಿ ಲಿವ್ ಇನ್ ಗೆಳತಿಯನ್ನು ಕೊಂದು, ಆಕೆಯ ಮೃತದೇಹದೊಂದಿಗೆ 2 ದಿನ ಮಲಗಿದ್ದ ವಿಚಿತ್ರ ಘಟನೆಯೊಂದು ಮಧ್ಯಪ್ರದೇಶದ ಭೋಪಾಲ್‌ನ ಗಾಯಿತ್ರಿ ನಗರದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಆರೋಪಿಯನ್ನು ವಿದಿಶಾದ ಸಿರೋಂಜ್ ಮೂಲದ ಸಚಿನ್ ರಜಪೂತ್ (32) ಹಾಗೂ ಮೃತ ಲಿವ್ ಇನ್ ಗೆಳತಿಯನ್ನು ರಿತಿಕಾ ಸೇನ್ (29) ಎಂದು ಗುರುತಿಸಲಾಗಿದೆ.
ಪ್ರಾಥಮಿಕ ಮಾಹಿತಿ ಪ್ರಕಾರ, ಕಳೆದ 3.5 ವರ್ಷಗಳಿಂದ ಸಚಿನ್ ಹಾಗೂ ರಿತಿಕಾ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದರು. ಸುಮಾರು 9 ತಿಂಗಳಿಂದ ಇಬ್ಬರು ಗಾಯತ್ರಿ ನಗರದ ಮನೆಯೊಂದರಲ್ಲಿ ವಾಸವಾಗಿದ್ದರು. ರಿತಿಕಾ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಸಚಿನ್ ನಿರುದ್ಯೋಗಿಯಾಗಿದ್ದ ಹಾಗೂ ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳಿದ್ದರು.
ಜೂ.27ರಂದು ರಾತ್ರಿ ರಿತಿಕಾಳಿಗೆ ಕಂಪನಿಯ ಬಾಸ್ ಜೊತೆ ಸಂಬಂಧವಿದೆ ಎಂದು ಶಂಕಿಸಿ ಇಬ್ಬರ ನಡುವೆ ಜಗಳವಾಗಿತ್ತು. ಅದು ವಾದ-ವಿವಾದಕ್ಕೆ ತಿರುಗಿ ಅತಿರೇಕಕ್ಕೆ ಹೋಗಿತ್ತು. ಇದೇ ಕೋಪದಲ್ಲಿ ಸಚಿನ್ ರಿತಿಕಾಳ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ಆಕೆಯ ಮೃತದೇಹವನ್ನು ಬೆಡ್ಶೀಟ್ನಲ್ಲಿ ಸುತ್ತಿ, ಆಕೆಯ ಪಕ್ಕದಲ್ಲಿ ಎರಡು ದಿನ ಮಲಗಿದ್ದಾನೆ. ಕೊಲೆ ಮಾಡಿದ ಬಳಿಕ ಕುಡಿಯುತ್ತಾ ತೀರಾ ಆಘಾತಕ್ಕೆ ಒಳಗಾಗಿದ್ದ. ನಶೆಯಲ್ಲಿ ತನ್ನ ಸ್ನೇಹಿತ ಅನೂಜ್‌ಗೆ ಕರೆ ಮಾಡಿ, ನಡೆದಿರುವ ವಿಷಯವನ್ನು ತಿಳಿಸಿದ. ಆದರೆ ಅನೂಜ್ ಮಾತ್ರ ನಶೆಯಲ್ಲಿ ಏನೇನೋ ಮಾತಾಡುತ್ತಿದ್ದಾನೆ ಎಂದುಕೊಂಡು ನಂಬಿರಲಿಲ್ಲ.
ಮಾರನೇ ದಿನ ಸಚಿನ್ ಮತ್ತದೇ ವಿಷಯವನ್ನು ಹೇಳಿದಾಗ ಅನೂಜ್ ಪೊಲೀಸರಿಗೆ ಮಾಹಿತಿ ನೀಡಿದ. ಬಳಿಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದಾಗ ರಿತಿಕಾ ಮೃತದೇಹ ಪತ್ತೆಯಾಗಿತ್ತು. ಸದ್ಯ ಆಕೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಆರೋಪಿ ಸಚಿನ್ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದ್ದು, ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.





