ಕರ್ನೂಲ್ : ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್‌ವೊಂದು ಕರ್ನೂಲ್ ಜಿಲ್ಲೆಯ ಚಿನ್ನಟೇಕೂರು ಬಳಿ ಬೈಕ್‌ಗೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮವಾಗಿ ಸಜೀವ ದಹನವಾದ ೨೦ ಮಂದಿಯ ಪೈಕಿ ೧೧ ಜನರ ಗುರುತು ಪತ್ತೆ ಹಚ್ಚಲಾಗಿದೆ. ಇನ್ನೂಳಿದ ಒಂಬತ್ತು ಜನರ ಮಾಹಿತಿ ಪಡೆಯಲು ಯತ್ನಿಸಲಾಗುತ್ತಿದೆ ಎಂದು ಕರ್ನೂಲ್ ವಿಭಾಗದ ಡಿಐಜಿ ಕೋಯಾ ಪ್ರವೀಣ್ ಮಾಹಿತಿ ನೀಡಿದ್ದಾರೆ.
ಸಜೀವ ದಹನವಾಗಿರುವ ದೇಹಗಳ ಡಿಎನ್‌ಎ ಮಾದರಿಗಳನ್ನು ವೈದ್ಯಕೀಯ ತಜ್ಞರ ತಂಡ ಸಂಗ್ರಹಿಸಿದೆ.
ಬೆಂಕಿ ಹೊತ್ತಿಕೊಂಡ ಬಸ್‌ನಲ್ಲಿ ಯಾವುದೇ ಅಗ್ನಿಶಾಮಕ ನಿಯಂತ್ರಣ ಸಾಧನಗಳು ಇರಲಿಲ್ಲ ಎಂದು ಡಿಐಜಿ ತಿಳಿಸಿದ್ದಾರೆ. ಇದು ಪ್ರಯಾಣದ ಸಮಯದಲ್ಲಿ ಸುರಕ್ಷತಾ ಅನುಸರಣೆ ಮತ್ತು ತುರ್ತು ಸಿದ್ಧತೆಯಲ್ಲಿನ ಲೋಪಗಳನ್ನು ಎತ್ತಿ ತೋರಿಸಿದೆ ಎಂದು ಅವರು ಹೇಳಿದ್ದಾರೆ. ಬಸ್ ದುರಂತದ ಬೆನ್ನಲ್ಲೇ ಖಾಸಗಿ ಬಸ್‌ಗಳ ಸುರಕ್ಷತೆಯ ಕುರಿತು ಚರ್ಚೆಗಳು ಶುರುವಾಗಿವೆ.
ಅಮಾಯಕರ ಜೀವಗಳ ರಕ್ಷಣೆಗೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಅನುಸರಿಸದ ಖಾಸಗಿ ಬಸ್ ಮಾಲೀಕರ ವಿರುದ್ಧ ಇಂತಹ ದುರ್ಘಟನೆಗಳು ಸಂಭವಿಸಿದಾಗ ಕೊಲೆ ಆರೋಪದಡಿ ಪ್ರಕರಣ ದಾಖಲಿಸಲು ತಮ್ಮ ಸರ್ಕಾರ ಹಿಂದೇಟು ಹಾಕುವುದಿಲ್ಲ ಎಂದು ತೆಲಂಗಾಣ ರಾಜ್ಯ ಸಾರಿಗೆ ಸಚಿವ ಪೂನಂ ಪ್ರಭಾಕರ್ ಎಚ್ಚರಿಕೆ ನೀಡಿದ್ದಾರೆ.
ಕರ್ನೂಲ್ ಬಳಿ ಬಸ್ ದುರಂತಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ತನಿಖೆ ಆರಂಭಿಸಿದ್ದು, ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಒಂದೇ ಕುಟುಂಬದ ನಾಲ್ವರು ಬಲಿ:
ಈ ಅಪಘಾತದಲ್ಲಿ ನೆಲ್ಲೂರು ಜಿಲ್ಲೆಯ ಗೊಲ್ಲವರಿಪಳ್ಳಿಯ ಒಂದು ಕುಟುಂಬದ ನಾಲ್ವರು ಮಂದಿ ಮೃತಪಟ್ಟಿದ್ದಾರೆ. ಅವರು ಗೊಲ್ಲ ರಮೇಶ್ (೩೫), ಅನುಷಾ (೩೦), ಮಾನಿಶ್ (೧೨), ಮಾನ್ವಿತ (೧೦) ಎಂದು ಗುರುತಿಸಲಾಗಿದೆ. ಬೆಂಗಳೂರು ಮೂಲದ ಸರಸ್ವತಿ ಮತ್ತು ಹಾರಿಕಾ ಎಂಬುವವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗೊಲ್ಲ ರಮೇಶ್ ಕುಟುಂಬವು ಬೆಂಗಳೂರಿನಲ್ಲಿ ನೆಲೆಸಿತ್ತು. ಹೈದರಾಬಾದ್‌ನಿಂದ ಬೆಂಗಳೂರಿಗೆ ಬಸ್‌ನಲ್ಲಿ ಬರುವಾಗ ದುರಂತ ಸಂಭವಿಸಿದ್ದು, ಇಡೀ ಕುಟುಂಬ ಸಜೀವ ದಹನವಾಗಿದೆ. ವಿಷಯ ತಿಳಿದು ಗೊಲ್ಲವರಿಪಳ್ಳಿಯ ಕುಟುಂಬದಲ್ಲಿ ಆಕ್ರಂದನ ಮುಗಿಲುಮುಟ್ಟಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಗೊಲ್ಲ ರಮೇಶ್ ಕುಟುಂಬ ದೀಪಾವಳಿ ಹಬ್ಬ ಆಚರಣೆಗೆ ನೆಲ್ಲೂರಿಗೆ ತೆರಳಿತ್ತು ಎನ್ನಲಾಗಿದೆ.
ಇದನ್ನೂ ಓದಿ:ಬೈಕ್‌ಗೆ ಬಸ್ ಡಿಕ್ಕಿ : ಗಾಢ ನಿದ್ರೆಯಲ್ಲಿದ್ದ 20 ಮಂದಿ ಪ್ರಯಾಣಿಕರು ಸುಟ್ಟು ಭಸ್ಮ…..
೧೯ ಮಂದಿ ಸುರಕ್ಷಿತ
ಬೆಂಕಿ ತಗುಲಿದಾಗ ಪ್ರಯಾಣಿಕರು ನಿದ್ರೆಯಲ್ಲಿದ್ದರಿಂದ ಹಾನಿ ಹೆಚ್ಚಾಗಿದೆ. ಕೆಲವರು ತುರ್ತು ಬಾಗಿಲನ್ನು ಮುರಿದು ಹೊರಬಂದರು, ಇನ್ನೂ ಕೆಲವರನ್ನು ರಕ್ಷಣೆ ಮಾಡಲಾಯಿತು. ಸುಮಾರು ೧೯ ಮಂದಿ ಸುರಕ್ಷಿತವಾಗಿದ್ದಾರೆ, ಅವರಲ್ಲಿ ಹಲವರು ಕರ್ನೂಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸ್ಥಳಕ್ಕೆ ತೆರಳಿದ ಕರ್ನಾಟಕದ ಸಾರಿಗೆ ಇಲಾಖೆ ಅಧಿಕಾರಿಗಳು
ಬೆಂಗಳೂರು : ಆಂಧ್ರಪ್ರದೇಶದ ಕರ್ನೂಲ್‌ನ ಬೆಂಗಳೂರು- ಹೈದರಾಬಾದ್ ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಬಸ್‌ಗೆ ಬೆಂಕಿ ತಗುಲಿದ್ದು, ಸ್ಥಳಕ್ಕೆ ರಾಜ್ಯದ ಸಾರಿಗೆ ಇಲಾಖೆ ಅಽಕಾರಿಗಳು ಹಾಗೂ ಪೊಲೀಸ್ ತಂಡ ತೆರಳಿದ್ದು, ಕನ್ನಡಿಗರು ಯಾರಾದರೂ ಅಪಾಯಕ್ಕೆ ಸಿಲುಕಿದ್ದಾರೆಯೇ ಎಂಬುದನ್ನು ಪರಿಶೀಲಿಸಿ ನೆರವಾಗುವಂತೆ ಬಾಗೇಪಲ್ಲಿ ಅಽಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ತಿಳಿಸಿದ್ದಾರೆ.
ಬೆಂಕಿಗೆ ಆಹುತಿಯಾಗಿರುವ ಬಸ್ ದೇಶದಾದ್ಯಂತ ಸಂಚರಿಸುವ ಪರ್ಮಿಟ್ ಹೊಂದಿತ್ತು ಎಂಬುದು ತಿಳಿದುಬಂದಿದೆ ಎಂದು ಸಾರಿಗೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಮೃತರ ಕುಟುಂಬಗಳಿಗೆ ತಲಾ ೫ ಲಕ್ಷ ರೂ. ಮತ್ತು ಗಾಯಾಳುಗಳಿಗೆ ತಲಾ ೨ ಲಕ್ಷ ರೂ. ಪರಿಹಾರ ನೀಡುವುದಾಗಿ ಆಂಧ್ರಪ್ರದೇಶ ಸಾರಿಗೆ ಸಚಿವ ರಾಮ್ ಪ್ರಸಾದ್ ರೆಡ್ಡಿ ಘೋಷಿಸಿದ್ದಾರೆ.





