ಕೋಲ್ಕತ್ತಾ: ಟ್ರೈನಿ ವೈದ್ಯೆ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಸಂಬಂಧ ಸುಪ್ರೀಂಕೋರ್ಟ್ ವಿಚಾರಣೆ ಮುಂದುವರಿದಿದ್ದು, ಘಟನೆ ಖಂಡಿಸಿ ಕಳೆದ ಕೆಲ ದಿನಗಳಿಂದ ನಡೆಸುತ್ತಿರುವ ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಮರಳುವಂತೆ ವೈದ್ಯರಿಗೆ ಸೂಚನೆ ನೀಡಲಾಗಿದೆ.
ವಿಚಾರಣೆ ವೇಳೆ ಘಟನೆಗೆ ಸಂಬಂಧಿಸಿದಂತೆ ಟಿಎಂಸಿ ಹಾಗೂ ಬಿಜೆಪಿಗೆ ಬುದ್ಧಿ ಹೇಳಿದ ನ್ಯಾಯಾಲಯ, ಇತ್ತ ಸಿಬಿಐ ಹಾಗೂ ಪಶ್ಚಿಮ ಬಂಗಾಳ ಸರ್ಕಾರ ರಾಜಕೀಯ ಲಾಭ ಪಡೆಯಲು ಹವಣಿಸುತ್ತಿರುವುದನ್ನು ಟೀಕಿಸಿದೆ.
ಇನ್ನು ಮಮತಾ ಬ್ಯಾನರ್ಜಿ ಕಡೆಗೆ ಕೈತೋರುವವರ ಬೆರಳು ಕತ್ತರಿಸಲಾಗುವುದು ಎಂಬ ಬಂಗಾಳ ಸಚಿವರೊಬ್ಬರ ಹೇಳಿಕೆಯನ್ನು ಸಿಬಿಐ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಪ್ರಸ್ತಾಪಿಸಿದರು.
ಆಗ ಪಶ್ಚಿಮ ಬಂಗಾಳ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ಪ್ರತಿಪಕ್ಷದ ನಾಯಕ ಸುವೇಂದು ಅಧಿಕಾರಿ ಗುಂಡು ಹಾರಿಸಲಾಗುವುದು ಅಂತ ಹೇಳಿರುವುದಾಗಿ ಕೋರ್ಟ್ ಗಮನಕ್ಕೆ ತಂದರು.
ಇನ್ನು ಕರ್ತವ್ಯ ಮಾಡುತ್ತಲೇ ಮುಷ್ಕರ ನಡೆಸುತ್ತಿರುವುದಾಗಿ ವೈದ್ಯರ ಸಂಘ ತಿಳಿಸಿದ್ದು, ಇದೇ ವೇಳೆ ಯುವವೈದ್ಯೆಯ ಅತ್ಯಾಚಾರ ಪ್ರಕರಣದ ತನಿಖಾ ಪ್ರಗತಿಯ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸುಪ್ರೀಂಕೋರ್ಟ್‌ಗೆ ಸಿಬಿಐ ಸಲ್ಲಿಸಿದೆ.
ಈ ಹಿನ್ನೆಲೆಯಲ್ಲಿ ವಾದ-ಪ್ರತಿವಾದ ಆಲಿಸಿದ ಕೋರ್ಟ್ ಮುಷ್ಕರ ಕೈಬಿಟ್ಟು, ಕರ್ತವ್ಯಕ್ಕೆ ಹಾಜರಾಗುವಂತೆ ವೈದ್ಯರಿಗೆ ಸೂಚನೆ ನೀಡಿದೆ.