ಕೇರಳ: ಕೇರಳದಲ್ಲಿ ಗ್ರಾಮ ಪಂಚಾಯತ್ ಊರಿನ ಯುವಕರಿಗೆ ಮದುವೆಯಾಗಿಲ್ಲ ಹೆಣ್ಣು ಸಿಗುತ್ತಿಲ್ಲ ಎಂದು ತಲೆಕೆಡಿಸಿಕೊಂಡಿದೆ. ಅಲ್ಲದೇ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿರುವ ಗ್ರಾಮ ಪಂಚಾಯತ್ ತನ್ನ ಊರಿನಲ್ಲಿ ವಿವಾಹಕ್ಕಾಗಿ ವಧು ವರರ ವೇದಿಕೆಯನ್ನು (ವೆಬ್‌ಸೈಟ್)ನ್ನು ಸ್ಥಾಪಿಸಿದೆ. ಇದನ್ನು ಅಧಿಕೃತವಾಗಿ ಆಗಸ್ಟ್ 23 ರಂದು ಉದ್ಘಾಟನೆಯಾಗಲಿದೆ.
ಕೇರಳದಲ್ಲಿ ಮದುವೆಗೆ ಹೆಣ್ಣು ಸಿಗಲು ಪರದಾಡುವಂತಹ ಸ್ಥಿತಿ ಇದೆ. ಹೆಣ್ಣೆ ಸಿಗದ ಕಾರಣಕ್ಕೆ ವಧು ದಕ್ಷಿಣೆ ನೀಡಿ ಬೇರೆ ಸಮೀಪದ ರಾಜ್ಯದ ಅಥವಾ ಗಡಿಭಾಗದ ಹೆಣ್ಣು ಮಕ್ಕಳನ್ನು ವಿವಾಹವಾಗುತ್ತಿದ್ದಾರೆ. ಜಾತಿ ಧರ್ಮ ಕುಲ ಗೋತ್ರ ಯಾವುದನ್ನು ನೋಡದೇ ಕೇವಲ ಮದುವೆಯಾಗಲು ಹೆಣ್ಣೊಂದು ಸಿಕ್ಕರೆ ಸಾಕು ಎಂಬಂತಹ ಸ್ಥಿತಿ ಕೇರಳದಲ್ಲಿದೆ. ವಿವಾಹವಾಗಲು ಹೆಣ್ಣು ಸಿಗದ ಕಾರಣಕ್ಕೆ ಬಹುತೇಕ ಯುವಕರು ಅವಿವಾಹಿತರಾಗಿ ಉಳಿಯುತ್ತಿದ್ದಾರೆ. ಇದೆಲ್ಲದರ ಬಗ್ಗೆ ಈಗ ಗಂಭೀರವಾಗಿ ತಲೆಕೆಡಿಸಿಕೊಂಡಿರುವ ಕೇರಳದ ಪಿಣರಾಯಿ ಗ್ರಾಮ ಪಂಚಾಯತ್ ಅವಿವಾಹಿತರಿಗೆ ವಿವಾಹ ವೇದಿಕೆಯನ್ನು ಸ್ಥಾಪಿಸಿದೆ.
30 ದಾಟಿದ ಅನೇಕರು ಅವಿವಾಹಿತರಾಗಿಯೇ ಉಳಿಯುತ್ತಿದ್ದು, ಅನೇಕ ಮಧ್ಯವಯಸ್ಕರಿಗೆ ಸೂಕ್ತವಾದ ಜೀವನ ಸಂಗಾತಿಯನ್ನು ಪಡೆಯಲು ಕಷ್ಟವಾಗುತ್ತಿದೆ ಎಂಬ ವಿಶ್ಲೇಷಣೆಯ ಆಧಾರದ ಮೇಲೆ ಕೇರಳದ ಕಣ್ಣೂರು ಜಿಲ್ಲೆಯ ಒಂದೆರಡು ಪಂಚಾಯತ್‌ಗಳು ಈ ವೈವಾಹಿಕ ವೆಬ್‌ಸೈಟ್ ಆರಂಭಕ್ಕೆ ಮುಂದಾಗಿವೆ. ಕೇರಳದ ಕಣ್ಣೂರು ಜಿಲ್ಲೆಯ ಪಿಣರಾಯಿ ಮತ್ತು ಪಟ್ಟುವಂ ಪಂಚಾಯತ್‌ಗಳು, ವೈವಾಹಿಕ ಸೇವೆಗಳನ್ನು ಪ್ರಾರಂಭಿಸುತ್ತಿದೆ.ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ತವರು ಪಟ್ಟಣವಾದ ಪಿಣರಾಯಿ ಪಂಚಾಯತ್‌ನ ಆನ್‌ಲೈನ್ ಪೋರ್ಟಲ್ ಅನ್ನು ಆಗಸ್ಟ್ 23 ರಂದು ಔಪಚಾರಿಕವಾಗಿ ಪ್ರಾರಂಭಿಸಲಾಗುತ್ತಿದೆ.
ಕೇರಳದಲ್ಲಿ 35 ವರ್ಷ ಮೇಲ್ಪಟ್ಟ ವ್ಯಕ್ತಿಗಳಿಗೆ ಸರಿಯಾದ ವಿವಾಹ ಸಂಬಂಧಗಳು ಬರುತ್ತಿಲ್ಲ ಎಂಬುದು ಸಾಮಾಜಿಕ ಸಮಸ್ಯೆಯಾಗುತ್ತಿದೆ ಎಂದು ಪಿಣರಾಯಿ ಪಂಚಾಯತ್ ಅಧ್ಯಕ್ಷ ಕೆ ಕೆ ರಾಜೀವನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ವಿವಾಹದ ವಯಸ್ಸು ದಾಟಿದ ಗಂಡು ಮತ್ತು ಹೆಣ್ಣು ಇಬ್ಬರೂ ಇದ್ದಾರೆ. ಆದ್ದರಿಂದ ಪಂಚಾಯತ್ ವೈವಾಹಿಕ ಸೇವೆಗಳ ಜಾರಿಗೆ ಮುಂದಾಯಿತು. ಇದು ವಿಧವೆಯರು, ವಿಧುರರು, ವಿಚ್ಛೇದಿತರು, ಬೇರ್ಪಟ್ಟ ವ್ಯಕ್ತಿಗಳಿಗೂ ಸಹ ಉಪಯುಕ್ತವಾಗಿದೆ. ಪಿಣರಾಯಿ ಪಂಚಾಯತ್ ಈ ಯೋಜನೆಗೆ ‘ಸಾಯೋಜ್ಯಂ’ ಎಂದು ಹೆಸರಿಟ್ಟರೆ, ಪಟ್ಟುವಂ ಪಂಚಾಯತ್ ‘ನವಮಾಂಗಲ್ಯಂ’ ಎಂಬ ಹೆಸರಿನೊಂದಿಗೆ ಇದೇ ಯೋಜನೆಯನ್ನು ಆರಂಭಿಸಿದೆ.
ಸೂಕ್ತವಾದ ಹೊಂದಾಣಿಕೆಗಳು ಕಂಡುಬಂದ ನಂತರ, ಪಂಚಾಯತ್ ಆನ್‌ಲೈನ್ ಸಭೆಯ ಸೌಲಭ್ಯಗಳು ಮತ್ತು ಸಮಾಲೋಚನೆ ಸೇವೆಗಳನ್ನು ವ್ಯವಸ್ಥೆ ಮಾಡುತ್ತದೆ. ಪಂಚಾಯತ್‌ನ ಮ್ಯಾಟ್ರಿಮೋನಿಯಲ್ ಮೂಲಕ ಮಾಡಿಕೊಳ್ಳುವ ಮೈತ್ರಿಗಳಲ್ಲಿ ವರದಕ್ಷಿಣೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಈ ಸೇವೆಗೆ ಯಾವುದೇ ಸೇವಾ ಶುಲ್ಕವನ್ನು ಸಹ ಸಂಗ್ರಹಿಸಲಾಗುವುದಿಲ್ಲ ಎಂದು ರಾಜೀವನ್ ಹೇಳಿದರು.