ರುದ್ರಪ್ರಯಾಗ : ಉತ್ತರಾಖಂಡದ ಗರ್ವಾಲ್ ಹಿಮಾಲಯದಲ್ಲಿರುವ ಕೇದಾರನಾಥ ದೇವಾಲಯದ ಬಾಗಿಲುಗಳನ್ನು ಗುರುವಾರದಿಂದ ಮುಚ್ಚಲಾಗಿದೆ.
ಚಳಿಗಾಲದ ಹಿನ್ನೆಲೆಯಲ್ಲಿ ಮುಂದಿನ ಆರು ತಿಂಗಳ ಕಾಲ, ಕೇದಾರನಾಥನನ್ನು ಅವರ ಚಳಿಗಾಲದ ನಿವಾಸವಾದ ಉಖಿಮಠದಲ್ಲಿ ಪೂಜಿಸಲಾಗುವುದು. ವಿಶೇಷ ಪೂಜೆಯ ನಂತರ, ಬೆಳಿಗ್ಗೆ ೮.೩೦ ಕ್ಕೆ ಬಾಬಾ ಕೇದಾರದ ಬಾಗಿಲುಗಳನ್ನು ಮುಚ್ಚಲಾಯಿತು ಎಂದು ಬದರಿನಾಥ-ಕೇದಾರನಾಥ ದೇವಾಲಯ ಸಮಿತಿ ಮೂಲಗಳು ತಿಳಿಸಿವೆ.
ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ನೂರಾರು ಮಂದಿಯೊಂದಿಗೆ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಆಡಳಿತ ಅಧಿಕಾರಿಗಳು, ದೇವಾಲಯ ಸಮಿತಿ ಅಧಿಕಾರಿಗಳು ಮತ್ತು ಹೆಚ್ಚಿನ ಸಂಖ್ಯೆಯ ಯಾತ್ರಿಕರು, ಪುರೋಹಿತರು ಉಪಸ್ಥಿತರಿದ್ದರು. ಬಾಗಿಲು ಮುಚ್ಚಿದ ನಂತರ, ಕೇದಾರನಾಥದ ಪಲ್ಲಕ್ಕಿಯು ಉಖಿಮಠದ ಓಂಕಾರೇಶ್ವರ ದೇವಾಲಯಕ್ಕೆ ವಿಧ್ಯುಕ್ತವಾಗಿ ಹೊರಟಿತು.
ಇದನ್ನು ಓದಿ: ಉತ್ತರಾಖಂಡದಲ್ಲಿ ಮಳೆಗೆ ಭೂಕುಸಿತ: ಕೇದಾರನಾಥ ಯಾತ್ರೆ ತಾತ್ಕಾಲಿಕ ಸ್ಥಗಿತ:
ಗುರುವಾಋ ರಾತ್ರಿ ರಾಂಪುರದಲ್ಲಿಯೇ ಉಳಿದು ಶುಕ್ರವಾರ ಗುಪ್ತಕಾಶಿಗೆ ಪಲ್ಲಕ್ಕಿ ಆಗಮಿಸಲಿದ್ದು, ಅಲ್ಲಿಂದ ಅಕ್ಟೋಬರ್ ೨೫ರಂದು ತನ್ನ ಚಳಿಗಾಲದ ಪೀಠವಾದ ಓಂಕಾರೇಶ್ವರ ದೇವಸ್ಥಾನಕ್ಕೆ ತೆರಳಲಿದೆ. ಮುಂದಿನ ವರ್ಷ ಏಪ್ರಿಲ್-ಮೇ ತಿಂಗಳಲ್ಲಿ ಕೇದಾರನಾಥ ದೇವಾಲಯದ ಬಾಗಿಲುಗಳು ಮತ್ತೆ ತೆರೆಯಲಿವೆ.
ಮಹಾಶಿವರಾತ್ರಿ ಹಬ್ಬದ ಸಂದರ್ಭದಲ್ಲಿ ದಿನಾಂಕ ಮತ್ತು ಸಮಯವನ್ನು ನಿರ್ಧರಿಸಲಾಗುವುದು. ರಾಜ್ಯ ಸರ್ಕಾರದ ಯೋಜಿತ ಪ್ರಯತ್ನಗಳಿಂದಾಗಿ ಈ ಬಾರಿ ಚಾರ್‌ಧಾಮ್ ಯಾತ್ರೆ ಯಶಸ್ವಿ ಮತ್ತು ಸುಗಮವಾಗಿ ಸಾಗಿದೆ ಎಂದು ಹೇಳಿದರು.





