Mysore
18
overcast clouds

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

ಗವಾಯಿ ಉತ್ತರಾಧಿಕಾರಿಯಾಗಿ ನ್ಯಾ.ಸೂರ್ಯಕಾಂತ್‌ : ನ.24ರಂದು CJI ಆಗಿ ಪ್ರಮಾಣ ವಚನ

ಹೊಸದಿಲ್ಲಿ : ಭಾರತದ 53 ನೇ ಸುಪ್ರೀಂಕೋರ್ಟ್‍ನ ಮುಖ್ಯ ನ್ಯಾಯಮೂರ್ತಿಯಾಗಿ ಹಿರಿಯ ನ್ಯಾಯಮೂರ್ತಿ ನ್ಯಾ.ಸೂರ್ಯಕಾಂತ್ ಅವರು ನ.24ರಂದು ಪ್ರಮಾಣವಚನ
ಸ್ವೀಕರಿಸಲಿದ್ದಾರೆ. 2027 ಫೆಬ್ರವರಿ 9, ರವರೆಗೆ ಅಧಿಕಾರದಲ್ಲಿ ಚಲಾಯಿಸಲಿದ್ದಾರೆ.

ರಾಷ್ಟ್ರಪತಿ ಭವನದ ದರ್ಬಾರ್ ಹಾಲ್ ನಲ್ಲಿ ನಡೆಯಲಿರುವ ವರ್ಣರಂಜಿತ ಸಮಾರಂಭದಲ್ಲಿ ನೂತನ ಮುಖ್ಯ ನ್ಯಾಯಮೂರ್ತಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಧಿಕಾರ ಗೌಪ್ಯತೆ ಬೋಧಿಸಲಿದ್ದಾರೆ. ನ್ಯಾ. ಸೂರ್ಯಕಾಂತ್ ಅವರು ಪ್ರಸ್ತುತ ಸುಪ್ರೀಂಕೋರ್ಟ್‍ನ ಎರಡನೇ ಹಿರಿಯ ನ್ಯಾಯಾಧೀಶರಾಗಿದ್ದಾರೆ.

ಪ್ರಮಾಣವಚನ ಸಮಾರಂಭದಲ್ಲಿ ಭೂತಾನ್, ಕೀನ್ಯಾ, ಮಾರಿಷಿಯಸ್, ನೇಪಾಳ, ಶ್ರೀಲಂಕಾ, ಬ್ರೆಜಿಲ್ ಸೇರಿದಂತೆ 7 ದೇಶಗಳ ಮುಖ್ಯ ನ್ಯಾಯಮೂರ್ತಿಗಳು ಹಾಗೂ ಸುಪ್ರೀಂಕೋರ್ಟ್‍ನ ನ್ಯಾಯಾಧೀಶರು ಭಾಗವಹಿಸಲಿದ್ದಾರೆ. ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಿಜೆಐ ಪ್ರಮಾಣವಚನ ಸಮಾರಂಭಕ್ಕೆ ಬೇರೆ ದೇಶದ ನ್ಯಾಯಮೂರ್ತಿಗಳು ಭಾಗವಹಿಸುತ್ತಿದ್ದಾರೆ. ಜೊತೆಗೆ ಅವರ ಕುಟುಂಬಸ್ಥರು ಭಾಗಿಯಾಗುವ ನಿರೀಕ್ಷೆಯಿದೆ.

ಪ್ರಸ್ತುತ ಸಿಜೆಐಯಾಗಿರುವ ಗವಾಯಿ ಅವರ ಅಧಿಕಾರಾವಧಿಯು ಇದೇ ನವೆಂಬರ್ 23ರಂದು ಕೊನೆಗೊಳ್ಳಲಿದೆ. ಬಳಿಕ ನ್ಯಾ.ಸೂರ್ಯಕಾಂತ್ ಅವರು 2027ರ ಫೆ.9ರವರೆಗೆ ಸೇವೆ ಸಲ್ಲಿಸಲಿದ್ದು, 14 ತಿಂಗಳು ಅಧಿಕಾರದಲ್ಲಿರಲಿದ್ದಾರೆ. ಇನ್ನೂ ನ್ಯಾ. ಸೂರ್ಯಕಾಂತ್ ಅವರ ಕುಟುಂಬಸ್ಥರನ್ನು ಪ್ರಮಾಣವಚನ ಸಮಾರಂಭಕ್ಕೆ ಆಹ್ವಾನಿಸಲಾಗಿದೆ. ಅವರ ಸಹೋದರರಾದ ರಿಷಿಕಾಂತ್, ಶಿವಕಾಂತ್ ಮತ್ತು ದೇವಕಾಂತ್ ಅವರು ತಮ್ಮ ಕುಟುಂಬಗಳೊಂದಿಗೆ ಭಾಗಿಯಾಗಲಿದ್ದು, ಪ್ರಮಾಣವಚನಕ್ಕೂ ಒಂದು ದಿನ ಮೊದಲು ದೆಹಲಿಗೆ ತೆರಳಿ, ಬಳಿಕ ಹರಿಯಾಣ ಭವನದಲ್ಲಿ ವಾಸ್ತವ್ಯ ಹೂಡಲಿದ್ದಾರೆ.

ಇದನ್ನೂ ಓದಿ: ಮುಂದಿನ CJI ಆಗಿ ನ್ಯಾ.ಸೂರ್ಯಕಾಂತ್‌ ನೇಮಕಕ್ಕೆ ಶಿಫಾರಸು ಮಾಡಿದ ಗವಾಯಿ

ಜಸ್ಟೀಸ್ ಸೂರ್ಯಕಾಂತ್ ಅವರು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಆರ್ಟಿಕಲ್ 370 ರದ್ದತಿ ವಿಚಾರಣೆಯಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸಿದ್ದರು. ಅಲ್ಲದೇ ನ್ಯಾ.ಸೂರ್ಯಕಾಂತ್ ಅವರು ಚುನಾವಣಾ ಬಾಂಡ್‍ಗಳು ಅಕ್ರಮ ಎಂದು ತೀರ್ಪು ನೀಡಿದ ಸುಪ್ರೀಂಕೋರ್ಟ್ ಪೀಠದ ಸದಸ್ಯರಾಗಿದ್ದರು.

ನ್ಯಾ.ಸೂರ್ಯಕಾಂತ್ ಅವರು ಪೆಗಾಸಸ್ ಫೋನ್ ಕದ್ದಾಲಿಕೆ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಪೀಠದ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ರೋಹ್ಟಕ್‍ನ ಮಹರ್ಷಿ ದಯಾನಂದ್ ಸರಸ್ವತಿ ವಿಶ್ವವಿದ್ಯಾಲಯದಿಂದ 1984ರಲ್ಲಿ ಕಾನೂನು ಪದವಿ ಪಡೆದ ನ್ಯಾ. ಸೂರ್ಯಕಾಂತ್, 1985ರಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‍ನಲ್ಲಿ ಕಾನೂನು ಅಭ್ಯಾಸವನ್ನು ಆರಂಭಿಸಿದರು.

2000ರಲ್ಲಿ ಹರಿಯಾಣದ ಅತ್ಯಂತ ಯುವ ವಕೀಲರಾಗಿ ನೇಮಕೊಂಡಿದ್ದ ನ್ಯಾ.ಸೂರ್ಯಕಾಂತ್, 2001ರಲ್ಲಿ ಸಿನಿಯರ್ ಅಡ್ವೋಕೇಟ್ ಆಗಿ ನೇಮಕೊಂಡಿದ್ದರು. ಮುಂದೆ 2004ರಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‍ನ ಜಡ್ಜ್ ಆಗಿ ನ್ಯಾ.ಸೂರ್ಯಕಾಂತ್ ನೇಮಕಗೊಂಡರು. ಅದೇ ರೀತಿ 2018ರಲ್ಲಿ ಹಿಮಾಚಲ ಪ್ರದೇಶ ಹೈಕೋರ್ಟ್‍ನ ಮುಖ್ಯ ನ್ಯಾಮೂರ್ತಿಯಾಗಿ ನ್ಯಾ.ಸೂರ್ಯಕಾಂತ್ ಸೇವೆ ಸಲ್ಲಿಸಿದ್ದಾರೆ.

Tags:
error: Content is protected !!