Mysore
21
mist

Social Media

ಬುಧವಾರ, 31 ಡಿಸೆಂಬರ್ 2025
Light
Dark

ಕರ್ನಾಟಕದಲ್ಲಿ ಉದ್ಯೋಗ ಸೃಷ್ಠಿ | ರಾಹುಲ್‌ ಗಾಂಧಿ ಹಾಗೂ ಅಶ್ವಿನ್‌ ವೈಷ್ಣವ್‌ ನಡುವೆ ಟ್ವಿಟ್‌ ವಾರ್…

ಹೊಸದಿಲ್ಲಿ : ಕೇಂದ್ರ ಸಚಿವರಾದ ಅಶ್ವಿನ್ ವೈಷ್ಣವ್ ಮತ್ತು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ನಡುವೆ ಕರ್ನಾಟಕದಲ್ಲಿ ಉದ್ಯೋಗ ಸೃಷ್ಟಿ ವಿಚಾರದ ಕುರಿತು ಎಕ್ಸ್ ನಲ್ಲಿ ಲ್ಲಿ ಕ್ರೆಡಿಟ್ ವಾರ್ ನಡೆದಿದೆ.

ಬೆಂಗಳೂರಿನಲ್ಲಿ ಫಾಕ್ಸ್‌ ಕಾನ್ ಕಂಪನಿ ಸುಮಾರು 30,000 ಮಹಿಳೆಯರನ್ನು ನೇಮಿಸಿಕೊಂಡಿರುವುದನ್ನು ರಾಹುಲ್ ಗಾಂಧಿ ಶ್ಲಾಘಿಸಿದ್ದರು. ಇದನ್ನು ʻಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಹೆಜ್ಜೆ’ ಎಂದು ಕರೆದಿದ್ದರು. ಕಾಂಗ್ರೆಸ್ ಆಡಳಿತವಿರುವ ಕರ್ನಾಟಕವು ಉತ್ತಮ ಉದ್ಯೋಗ ವಾತಾವರಣ ಸೃಷ್ಟಿಸಿದೆ ಎಂದು ಅವರು ಫೇಸ್‍ಬುಕ್ ನಲ್ಲಿ ಬರೆದುಕೊಂಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಅಶ್ವಿನಿ ವೈಷ್ಣವ್, ‘ಪ್ರಧಾನಿ ನರೇಂದ್ರ ಮೋದಿ ಅವರ ‘ಮೇಕ್ ಇನ್ ಇಂಡಿಯಾ’ ಕಾರ್ಯಕ್ರಮದ ಯಶಸ್ಸನ್ನು ಗುರುತಿಸಿದ್ದಕ್ಕೆ ಧನ್ಯವಾದಗಳು’ ಎಂದು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ.

ರಾಹುಲ್ ಗಾಂಧಿ ಅವರು ಫಾಕ್ಸ್‌ ಕಾನ್ ನೇಮಕಾತಿ ಸುದ್ದಿಯ ಪತ್ರಿಕಾ ತುಣುಕನ್ನು ಫೇಸ್‍ಬುಕ್ ನಲ್ಲಿ ಹಂಚಿಕೊಂಡಿದ್ದರು. ‘ಉತ್ಪಾದನಾ ಕ್ಷೇತ್ರ ಇಷ್ಟು ವೇಗವಾಗಿ ಮತ್ತು ದೊಡ್ಡ ಪ್ರಮಾಣದಲ್ಲಿ ಬೆಳೆಯಲು ಅನುಕೂಲಕರ ವಾತಾವರಣವನ್ನು ಕರ್ನಾಟಕ ಸೃಷ್ಟಿಸುತ್ತಿದೆ’ ಎಂದು ಅವರು ಬರೆದಿದ್ದರು. ‘ಇಂತಹ ಭಾರತವನ್ನು ನಾವು ನಿರ್ಮಿಸಬೇಕು. ಎಲ್ಲರಿಗೂ ಗೌರವಯುತ ಉದ್ಯೋಗ ಮತ್ತು ಅವಕಾಶಗಳು ಸಿಗಬೇಕು’ ಎಂದೂ ಅವರು ಹೇಳಿದ್ದರು.
ಸಚಿವ ಅಶ್ವಿನಿ ವೈಷ್ಣವ್, ರಾಹುಲ್ ಗಾಂಧಿ ಅವರ ಈ ಗುರುತಿಸುವಿಕೆಗೆ ಧನ್ಯವಾದಗಳು. ನೀವು ಗಮನಿಸಿದಂತೆ, ನಮ್ಮ ಪ್ರಧಾನಿಯವರ ದೂರದೃಷ್ಟಿಯನ್ನು ನಾವು ಜಾರಿಗೆ ತರುತ್ತಿರುವುದರಿಂದ ನಾವು ಉತ್ಪಾದನಾ ಆರ್ಥಿಕತೆಯಾಗುತ್ತಿದ್ದೇವೆ’ ಎಂದು ಅವರು ಟ್ವೀಟ್ ಮಾಡಿದರು.

ಇದನ್ನು ಓದಿ: ಚಿತ್ರದುರ್ಗ ಬಸ್‌ ದುರಂತ | ಶಾಲಾ ಮಕ್ಕಳಿದ್ದ ಮತ್ತೊಂದು ಬಸ್ಸಿಗೂ ಬೆಂಕಿ : ಕೂದಲೆಳೆ ಅಂತರದಲ್ಲಿ ಪವಾಡಸದೃಶ ಪಾರು!

ಚರ್ಚೆ ಯಾಕೆ?
ರಾಹುಲ್ ಗಾಂಧಿ ಕಳೆದ ವಾರ ಜರ್ಮನಿ ಪ್ರವಾಸದಲ್ಲಿದ್ದರು. ಈ ವೇಳೆ ಭಾರತದಲ್ಲಿ ಉತ್ಪಾದನಾ ಸಾಮಥ್ರ್ಯ ಕುಸಿಯುತ್ತಿದೆ ಎಂದು ಹೇಳಿಕೆ ನೀಡಿದ್ದು ದೊಡ್ಡ ಚರ್ಚೆಯಾಗಿತ್ತು. ಮ್ಯೂನಿಕ್‍ನಲ್ಲಿರುವ ಬಿಎಂಡಬ್ಲ್ಯೂ ಘಟಕಕ್ಕೆ ಭೇಟಿ ನೀಡಿದ ಬಳಿಕ ರಾಹುಲ್ ಗಾಂಧಿಯವರು ಸಾಮಾಜಿಕ ಮಾಧ್ಯಮ ಇನ್‍ಸ್ಟಾಗ್ರಾಮ್‍ನಲ್ಲಿ ವೀಡಿಯೊವೊಂದನ್ನು ಪೋಸ್ಟ್ ಮಾಡಿದ್ದರು. ಉತ್ಪಾದನೆಯು ಬಲವಾದ ಆರ್ಥಿಕತೆಯ ಬೆನ್ನೆಲುಬಾಗಿದೆ. ದುಃಖಕರ ವಿಚಾರವೆಂದರೆ ಭಾರತದಲ್ಲಿ ಉತ್ಪಾದನೆ ಕುಸಿಯುತ್ತಿದೆ. ದೊಡ್ಡ ಪ್ರಮಾಣದ ಉದ್ಯೋಗಗಳನ್ನು ಸೃಷ್ಟಿಸಲು ಭಾರತಕ್ಕೆ ಉತ್ತಮ ಉತ್ಪಾದನಾ ವಾತಾವರಣದ ಅಗತ್ಯವಿದೆ. ಪ್ರಸ್ತುತ ಭಾರತದಲ್ಲಿ ಉತ್ಪಾದನಾ ವಲಯವು ನಿರೀಕ್ಷಿತ ವೇಗದಲ್ಲಿ ಬೆಳೆಯುತ್ತಿಲ್ಲ. ಇದು ಯುವಜನರಿಗೆ ಸಾಕಷ್ಟು ಉದ್ಯೋಗಾವಕಾಶಗಳನ್ನು ತಡೆಯುತ್ತಿದೆ ಎಂದು ಅವರು ಹೇಳಿದ್ದರು.

ರಾಹುಲ್ ಹೇಳಿಯ ನಂತರ ಬಿಜೆಪಿ ನಾಯಕರು ಮೇಕ್ ಇನ್ ಯೋಜನೆಯ ಸಾಧನೆಗಳ ವಿವರವನ್ನು ಪೋಸ್ಟ್‌ ಮಾಡಿ ತಿರುಗೇಟು ನೀಡಿದ್ದರು. ಈ ಚರ್ಚೆ ನಡೆಯುತ್ತಿರುವ ಸಮಯದಲ್ಲೇ ರಾಹುಲ್ ಗಾಂಧಿ ಕರ್ನಾಟಕದ ಫಾಕ್ಸ್‌ ಕಾನ್ ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಯನ್ನು ಪ್ರಕಟಿಸಿ ಕಾಂಗ್ರೆಸ್ ಸರ್ಕಾರದ ಸಾಧನೆ ಎಂದು ಬಣ್ಣಿಸಿದ್ದರು. ರಾಹುಲ್ ಪ್ರಶಂಸೆಯನ್ನೇ ಸಾಲುಗಳನ್ನು ಅಶ್ವಿನಿ ವೈಷ್ಣವ್ ಈಗ ತೆಗೆದುಕೊಂಡು ಇದು ನಮ್ಮ ಸರ್ಕಾರದ ಸಾಧನೆ ಎಂದು ಬಿಂಬಿಸಿದ್ದಾರೆ.

ಫಾಕ್ಸ್‌ ಕಾನ್ ಕಂಪನಿಯಲ್ಲಿ ನೇಮಕಾತಿ
ತೈವಾನ್ ಮೂಲದ ಫಾಕ್ಸ್‌ ಕಾನ್ ಕಂಪನಿ ಕೇವಲ ಎಂಟು-ಒಂಬತ್ತು ತಿಂಗಳಲ್ಲಿ ಇಷ್ಟು ದೊಡ್ಡ ಪ್ರಮಾಣದ ನೇಮಕಾತಿ ಮಾಡಿಕೊಂಡಿರುವುದು ಭಾರತದಲ್ಲಿಯೇ ಅತ್ಯಂತ ವೇಗವಾಗಿ ಕಾರ್ಖಾನೆ ಸ್ಥಾಪನೆಯಾದ ಉದಾಹರಣೆಗಳಲ್ಲಿ ಒಂದಾಗಿದೆ. 300 ಎಕರೆ ವಿಸ್ತೀರ್ಣದಲ್ಲಿರುವ ಈ ಘಟಕ, ಮುಖ್ಯವಾಗಿ ಮಹಿಳೆಯರಿಂದ ನಡೆಸಲ್ಪಡುತ್ತಿದೆ ಮತ್ತು 19-24 ವರ್ಷ ವಯಸ್ಸಿನ ಹೊಸ ಕಾರ್ಮಿಕರನ್ನು ಹೆಚ್ಚಾಗಿ ಹೊಂದಿದೆ. ಇದು ಚೀನಾದ ಹೊರಗೆ ತಮ್ಮ ಪೂರೈಕೆ ಸರಪಳಿಯನ್ನು ವಿಸ್ತರಿಸಲು ಆಪಲ್ ಕಂಪನಿ ಮಾಡುತ್ತಿರುವ ಪ್ರಯತ್ನವನ್ನು ತೋರಿಸುತ್ತದೆ. ಈ ಘಟಕದಲ್ಲಿ ಉತ್ಪಾದನೆಯಾಗುವ ಶೇ.80 ಕ್ಕಿಂತ ಹೆಚ್ಚು ವಸ್ತುಗಳು ರಫ್ತಾಗುತ್ತಿವೆ. ಇದು ಆಪಲ್‍ನ ಜಾಗತಿಕ ಉತ್ಪಾದನಾ ಜಾಲದಲ್ಲಿ ಭಾರತದ ಪಾತ್ರವನ್ನು ಎತ್ತಿ ತೋರಿಸುತ್ತದೆ.

ಈ ಘಟನೆಯು ಭಾರತದಲ್ಲಿ ಉತ್ಪಾದನಾ ಕ್ಷೇತ್ರವು ಎಷ್ಟು ವೇಗವಾಗಿ ಬೆಳೆಯುತ್ತಿದೆ ಎಂಬುದನ್ನು ತೋರಿಸುತ್ತದೆ. ಫಾಕ್ಸ್‌ ಕಾನ್ ನಂತಹ ದೊಡ್ಡ ಕಂಪನಿಗಳು ಭಾರತದಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರಿಸುತ್ತಿವೆ. ಇದು ದೇಶದ ಆರ್ಥಿಕತೆಗೆ ಮತ್ತು ಉದ್ಯೋಗ ಸೃಷ್ಟಿಗೆ ಬಹಳ ಮುಖ್ಯವಾಗಿದೆ. ರಾಹುಲ್ ಗಾಂಧಿ ಅವರು ಇದನ್ನು ಕಾಂಗ್ರೆಸ್ ಸರ್ಕಾರದ ಸಾಧನೆ ಎಂದು ಹೇಳಿದರೆ, ಅಶ್ವಿನಿ ವೈಷ್ಣವ್ ಅವರು ಇದನ್ನು ಬಿಜೆಪಿ ಸರ್ಕಾರದ ‘ಮೇಕ್ ಇನ್ ಇಂಡಿಯಾ’ ಯೋಜನೆಯ ಯಶಸ್ಸು ಎಂದು ಹೇಳುತ್ತಿದ್ದಾರೆ. ಈ ವಿಚಾರದಲ್ಲಿ ರಾಜಕೀಯ ನಾಯಕರ ನಡುವೆ ಭಿನ್ನಾಭಿಪ್ರಾಯವಿದೆ. ಆದರೆ, ಒಟ್ಟಾರೆಯಾಗಿ, ಇದು ಭಾರತದ ಉತ್ಪಾದನಾ ಕ್ಷೇತ್ರದ ಬೆಳವಣಿಗೆಗೆ ಒಳ್ಳೆಯ ಸಂಕೇತವಾಗಿದೆ.

Tags:
error: Content is protected !!