ಜಮ್ಮು-ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದ ಉಧಮ್‌ಪುರದಲ್ಲಿ ಗಸ್ತು ಪಡೆಯ ಮೇಲೆ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಗೆ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಅಧಿಕಾರಿಯೊಬ್ಬರು ಹುತಾತ್ಮರಾಗಿದ್ದಾರೆ.
ಈ ಪ್ರದೇಶದಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ಆರಂಭಿಸಲಾಗಿದ್ದು, ಉಗ್ರರು ಅಡಗಿರುವ ತಾಣಗಳ ಬಳಿ ಹೆಚ್ಚಿನ ಯೋಧರನ್ನು ನಿಯೋಜಿಸಲಾಗಿದೆ.
ಸಿಆರ್‌ಪಿಎಫ್ ಹಾಗೂ ಜಮ್ಮು ಮತ್ತು ಕಾಶ್ಮೀರದ ಪೊಲೀಸರ ವಿಶೇಷ ಕಾರ್ಯಾಚರಣೆ ಗುಂಪು ಉಧಮ್‌ಪುರದ ದಾದು ಪ್ರದೇಶದಲ್ಲಿ ಭಯೋತ್ಪಾದಕರ ಗುಂಡಿನ ದಾಳಿಗೆ ಒಳಗಾಗಿದೆ.
ಕಾಶ್ಮೀರಕ್ಕೆ ಹೋಲಿಸಿದರೆ ಹಲವಾರು ವರ್ಷಗಳ ಕಾಲ ಶಾಂತವಾಗಿದ್ದ ಜಮ್ಮು ಪ್ರದೇಶದಲ್ಲಿ ಇದೀಗ ಗುಂಡಿನ ಸದ್ದು ಕೇಳಿ ಬಂದಿದೆ. ಜಮ್ಮುವಿನಲ್ಲಿ ದಟ್ಟವಾದ ಕಾಡುಗಳು ಹಾಗೂ ಭಯೋತ್ಪಾದಕರು ಅಡಗಿಕೊಳ್ಳಲು ಸೂಕ್ತ ಕಡಿದಾದ ಪರ್ವತಗಳಿವೆ.
ಈ ಹಿನ್ನೆಲೆಯಲ್ಲಿ ಭಯೋತ್ಪಾದಕರ ಹಾವಳಿ ಹೆಚ್ಚಾಗಿದ್ದು, ಪೊಲೀಸರು ಹಾಗೂ ಭಾರತೀಯ ಸೇನೆ ಈ ಪ್ರದೇಶಗಳಲ್ಲಿ ಹದ್ದಿನ ಕಣ್ಣಿಟ್ಟಿದೆ.