ನವದೆಹಲಿ: ಹಾಸನ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಪ್ರಜ್ವಲ್ ರೇವಣ್ಣ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದುಗೊಳಿಸುವಂತೆ ಸಿಎಂ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರದ ವಿದೇಶಾಂಗ ಸಚಿವಾಲಯಕ್ಕೆ ಪತ್ರ ಬರೆದಿದ್ದರು. ಇದರ ಬೆನ್ನಲ್ಲೇ ವಿದೇಶಾಂಗ್ ಸಚಿವಾಲಯ ರೇವಣ್ಣ ಅವರಿಗೆ ಶೋಕಾಸ್ ನೋಟಿಸ್ ನೀಡಿದೆ. ಇದರೊಂದಿಗೆ ಈ ಪ್ರಕರಣದ ಬಗ್ಗೆ ಮೊದಲ ಬಾರಿಗೆ ವಿದೇಶಾಂಗ ಸಚಿವ ಜೈ ಶಂಕರ್ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರಜ್ವಲ್ ರೇವಣ್ಣ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದುಗೊಳಿಸುವಂತೆ ಕೋರಿ ಕರ್ನಾಟಕ ಸರ್ಕಾರ ನೀಡಿರುವ ಅರ್ಜಿಯನ್ನು ಮೇ. 21ರಂದು ಸ್ವೀಕರಿಸಲಾಗಿದ್ದು, ಪಾಸ್‌ಪೋರ್ಟ್ ರದ್ದುಗೊಳಿಸುವ ಬಗ್ಗೆ ಕಾರ್ಯಪ್ರವೃತ್ತರಾಗಿದ್ದೇವೆ ಎಂದು ಖಚಿತ ಪಡಿಸಿದೆ.
ಇಂದು ಖಾಸಗಿ ವಾಹಿನಿಯೊಂದರಲ್ಲಿ ಮಾತನಾಡಿರುವ ವಿದೇಶಾಂಗ ಸಚಿವ ಜೈ ಶಂಕರ್, ಮೇ. 21ರಂದೇ ಕರ್ನಾಟಕದ ಮನವಿಯನ್ನು ವಿದೇಶಾಂಗ ಸಚಿವಾಲಯ ಸ್ವೀಕರಿಸಿದೆ. ಮತ್ತು ಮೇ.23 ರಿಂದಲೇ ಪಾಸ್‌ಪೋರ್ಟ್ ವಶಪಡಿಸಿಕೊಳ್ಳಲು ಮುಂದಾಗಿದೆ. ಆದರೆ ಪಾಸ್‌ಪೋರ್ಟ್ ನಿಯಮಾನುಸಾರವೇ ಆ ಕೆಲಸವನ್ನು ಮಾಡಬೇಕಿದೆ. ರೇವಣ್ಣ ಅವರ ಪಾಸ್‌ಪೋರ್ಟ್ ವಶಪಡಿಸಿಕೊಳ್ಳಲು ನ್ಯಾಯಾಲಯ ಹಾಗೂ ಪೊಲೀಸರ ಸಹಕಾರ ಅಗತ್ಯವಿದೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.
ಇನ್ನು ರಾಜ್ಯ ಸರ್ಕಾರದ ಮನವಿಗೆ ಸ್ಪಂದನೆ ನೀಡಿರುವ ಕೇಂದ್ರ ವಿದೇಶಾಂಗ ಸಚಿವಾಲಯ ಪ್ರಜ್ವಲ್ ರೇವಣ್ಣ ವಿರುದ್ಧ ಶೋಕಾಸ್ ನೋಟಿಸ್ ನೀಡಿದ್ದಾರೆ. ಈ ಸಂಬಂಧ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್‌ನ್ನು ಯಾವ ಕಾರಣಕ್ಕಾಗಿ ರದ್ದು ಮಾಡಬಾರದು ಎಂಬ ಬಗ್ಗೆ 10 ದಿನಗಳ ಒಳಗಾಗಿ ವಿದೇಶಾಂಗ ಸಚಿವಾಲಯಕ್ಕೆ ಪ್ರಜ್ವಲ್ ಮಾಹಿತಿ ನೀಡಬೇಕಿದೆ.