ಗಾಜಾ : ತಾತ್ಕಾಲಿಕ ಕದನ ವಿರಾಮ ಒಪ್ಪಂದದ ನಡುವೆಯೇ, ಇಸ್ರೇಲಿ ಸೇನೆ ಭಾನುವಾರ ಪ್ಯಾಲೆಸ್ತೀನ್‌ನ ರಫಾ ಹಾಗೂ ದಕ್ಷಿಣ ಗಾಜಾದ ವಿವಿಧೆಡೆ ದಾಳಿ ನಡೆಸಿದೆ ಎಂದು ಇಸ್ರೇಲಿ ಸುದ್ದಿಸಂಸ್ಥೆಗಳು ವರದಿ ಮಾಡಿವೆ.
ಪರಿಸ್ಥಿತಿಯ ಕುರಿತು ಪ್ರಧಾನಿ ಬೆಂಜಮಿನ್ ನೆತನ್ಯಾಹು, ರಕ್ಷಣಾ ಸಚಿವ ಇಸ್ರೇಲ್ ಕಾತ್ಜ್ ಹಾಗೂ ಸೇನೆಯ ಹಿರಿಯ ಅಧಿಕಾರಿಗಳ ನಡುವೆ ದೂರವಾಣಿ ಮೂಲಕ ಮಾತುಕತೆ ನಡೆದಿದೆ ಎಂದು ಇಸ್ರೇಲ್‌ನ ಪ್ರಸಾರಕ ಚಾನೆಲ್ 12 ತಿಳಿಸಿದೆ.
ಇಸ್ರೇಲ್‌ನ ಸಾರ್ವಜನಿಕ ಪ್ರಸಾರ ಸಂಸ್ಥೆಯ ಪ್ರಕಾರ, ಈ ದಾಳಿಯನ್ನು ಹಮಾಸ್ ಸದಸ್ಯರೊಂದಿಗೆ ನಡೆದ ಗುಂಡಿನ ದಾಳಿಗೆ ಪ್ರತಿಯಾಗಿ ನಡೆಸಲಾಗಿದೆ. ರಫಾದಲ್ಲಿ ಐಇಡಿ ಸ್ಫೋಟಗೊಂಡು ಇಸ್ರೇಲಿ ಸೈನಿಕರಿಗೆ ಗಾಯಗಳಾಗಿದ್ದವು. ಅಲ್ಲದೇ ಈ ಘಟನೆಯ ಹಿಂದೆ ಇಸ್ರೇಲ್ ಸೇನೆಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದ ಸಶಸ್ತ್ರ ಗುಂಪಿನ ಕೈವಾಡವಿದೆ ಎಂದು ಕತಾರ್ ನಿಯಂತ್ರಣದ ಅಲ್ ಜಜೀರಾ ವಾಹಿನಿ ವರದಿ ಮಾಡಿದೆ.
ಇದನ್ನು ಓದಿ; ಆತಂಕದ ಮಧ್ಯೆ ಕದನ ವಿರಾಮ-ಗೆದ್ದವರು ಯಾರು?
“ಹಮಾಸ್ ಅನ್ನು ಸಂಪೂರ್ಣವಾಗಿ ನಿಶಸ್ತ್ರೀಕರಣ ಮತ್ತು ಪ್ಯಾಲೆಸ್ತೀನ್ ಪ್ರದೇಶವನ್ನು ಸಶಸ್ತ್ರೀಕರಣಗೊಳಿಸಿದಾಗ ಮಾತ್ರ ಗಾಜಾದಲ್ಲಿ ಯುದ್ಧ ಅಂತ್ಯವಾಗಲಿದೆ. ಸುಲಭವಾಗಲಿ, ಕಠಿಣವಾಗಲಿ… ಈ ಗುರಿ ಈಡೇರಿದಾಗ ಯುದ್ಧ ಕೊನೆಗೊಳ್ಳುತ್ತದೆ” ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.
ಬಸ್ ಮೇಲೆ ಇಸ್ರೇಲ್ ಟ್ಯಾಂಕ್ ದಾಳಿ ಬಳಿಕ, ಇಬ್ಬರು ಪುರುಷರು, ಮೂವರು ಮಹಿಳೆಯರು ಮತ್ತು ನಾಲ್ವರು ಮಕ್ಕಳ ಮೃತದೇಹಗಳನ್ನು ಪತ್ತೆಯಾಗಿವೆ ಎಂದು ಹಮಾಸ್ ನಿಯತ್ರಣದಲ್ಲಿರುವ ಗಾಜಾದ ನಾಗರಿಕ ರಕ್ಷಣಾ ಸಂಸ್ಥೆ ತಿಳಿಸಿದೆ.
“ರಫಾ ಪ್ರದೇಶದಲ್ಲಿ ಅನೇಕ ಉಗ್ರರು ಸೈನಿಕರ ಮೇಲೆ ಗುಂಡಿನ ದಾಳಿ ನಡೆಸಿದ್ದು, ಘಟನೆಯಲ್ಲಿ ಯಾವುದೇ ಸಾವು-ನೋವುಗಳು ಸಂಭವಿಸಿರಲಿಲ್ಲ. ಅದೇ ದಿನ ಖಾನ್ ಯೂನಿಸ್‌ನಲ್ಲಿಯೂ ಸೇನಾ ಪಡೆಗಳೆಡೆಗೆ ನುಗ್ಗುತ್ತಿದ್ದ ಮತ್ತೊಂದು ಉಗ್ರರ ಗುಂಪನ್ನು ಹೊಡೆದುರುಳಿಸಲಾಗಿದೆ” ಎಂದು ಶುಕ್ರವಾರ ಇಸ್ರೇಲ್ ಸೇನೆ ಹೇಳಿತ್ತು.
ಈ ದಾಳಿಗಳ ಬಳಿಕ ಕದನ ವಿರಾಮ ಉಲ್ಲಂಘನೆ ಮಾಡಲಾಗಿದೆ ಎಂದು ಇಸ್ರೇಲ್ ಮತ್ತು ಹಮಾಸ್ ಪರಸ್ಪರ ಆರೋಪ ಮಾಡಿಕೊಂಡಿವೆ. ಅಮೆರಿಕ ಮಧ್ಯಸ್ಥಿಕೆಯಲ್ಲಿ ನಡೆದ ಕದನ ವಿರಾಮ ಒಪ್ಪಂದದ ಪ್ರಕಾರ, ಹಮಾಸ್ ಎಲ್ಲ 20 ಇಸ್ರೇಲಿ ಒತ್ತೆಯಾಳುಗಳನ್ನು ಮತ್ತು 12 ಮೃತದೇಹಗಳನ್ನು ಮರಳಿಸುವ ಮಾತುಕತೆಯಾಗಿತ್ತು. ಇದೀಗ ಗಾಜಾದ ಅವಶೇಷಗಳಡಿ ಸಿಲಿಕಿರುವ ಉಳಿದ ಮೃತದೇಹಗಳನ್ನು ಪತ್ತೆಹಚ್ಚಲು ಸಮಯ ಮತ್ತು ತಾಂತ್ರಿಕ ಸಹಾಯದ ಅಗತ್ಯವಿದೆ ಎಂದು ಹಮಾಸ್ ಹೇಳಿದೆ.





