ಇರಾನ್: ಇರಾನ್ ದೇಶದ ತಬಾಸ್‌ನಲ್ಲಿರುವ ಕಲ್ಲಿದ್ದಲು ಗಣಿಯಲ್ಲಿ ಸಂಭವಿಸಿರುವ ಸ್ಫೋಟದಲ್ಲಿ 50 ಜನ ಸಾವನ್ನಪ್ಪಿದ್ದು, 17ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ತಬಾಸ್‌ನಲ್ಲಿ ಮಿಥೇನ್ ಅನಿಲ ಸೋರಿಕೆಯಿಂದ ಈ ದುರಂತ ಸಂಭವಿಸಿದ್ದು, ಸ್ಫೋಟದ ನಂತರ ಮೂವರು ಗಣಿಯಲ್ಲೇ ಸಿಲುಕಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇರಾನ್ ರಾಜಧಾನಿ ತೆಹ್ರಾನ್‌ನಿಂದ ಸುಮಾರು 540 ಕಿ.ಮೀ.ದೂರದಲ್ಲಿ ಈ ದುರಂತ ಸಂಭವಿಸಿದೆ. ಅಲ್ಲದೇ ಅಂದಾಜು 70 ಜನ ಕಲ್ಲಿದ್ದಲು ಗಣಿಯಲ್ಲಿ ಕೆಲಸ ಮಾಡುತ್ತಿರುವಾಗಲೇ ಈ ಅನಾಹುತ ನಡೆದಿದೆ ಎನ್ನಲಾಗಿದೆ.
ಇರಾನ್‌ನ ಪ್ರಾಂತೀಯ ಗವರ್ನರ್ ಮೊಹಮ್ಮದ್ ಜಾವಾದ್ ಕೆನಾಟ್ ಅವರು ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ ಮತ್ತು ಗಾಯಾಳುಗಳ ಸಂಖ್ಯೆಯನ್ನು ರಾಜ್ಯ ಮಾಧ್ಯಮಕ್ಕೆ ನೀಡಿದ ವರದಿಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಈ ಘಟನಾವಳಿಗೆ ಸಂಬಂಧಿಸಿದಂತೆ ಇರಾನ್‌ನ ನೂತನ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಮಾತನಾಡಿ, ಘಟನೆಯಲ್ಲಿ ಅನೇಕ ದೇಶವಾಸಿಗಳು ಮರಣ ಹೊಂದಿದ್ದಾರೆ. ಅವರ ಕುಟುಂಬಗಳಿಗೆ ನಾನು ಸಂತಾಪವನ್ನು ವ್ಯಕ್ತಪಡಿಸುತ್ತೇನೆ ಎಂದರು.
ನಂತರ ತಬಾಸ್‌ನ ಕಲ್ಲಿದ್ದಲು ಗಣಿಯೊಂದರಲ್ಲಿ ಸಿಕ್ಕಿಬಿದ್ದವರನ್ನು ರಕ್ಷಿಸಲು ಹಾಗೂ ಮರಣ ಹೊಂದಿರುವ ಮೃತರ ಕುಟುಂಬಗಳಿಗೆ ನೆರವು ಈಗಾಗಲೇ ಸೂಚಿಸಲಾಗಿದೆ. ಜೊತೆಗೆ ಈ ಘಟನೆಗೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸಲಾಗಿದೆ ಎಂದು ಹೇಳಿದರು.