ಹೊಸದಿಲ್ಲಿ : ದೆಹಲಿಯಲ್ಲಿ ದಿನದಿಂದ ದಿನಕ್ಕೆ ವಾಯು ಮಾಲಿನ್ಯ ಹೆಚ್ಚಾಗುತ್ತಿದ್ದು, ಸುಪ್ರೀಂ ಕೋರ್ಟ್‌ನ ಕಲಾಪವನ್ನು ವರ್ಚುವಲ್ ವೇದಿಕೆಯಲ್ಲೇ ನಡೆಸುವ ಸಾಧ್ಯತೆಯನ್ನು ಪರಿಗಣಿಸುತ್ತಿರುವುದಾಗಿ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಬುಧವಾರ ಹೇಳಿದ್ದಾರೆ. ಮುಂಜಾನೆ ಸುಮಾರು ಒಂದು ಗಂಟೆಯ ನಡಿಗೆ ಸಂದರ್ಭದಲ್ಲಿ ಅವರು ಅಸ್ವಸ್ಥರಾದಂತಾಗಿದ್ದನ್ನು ಹಂಚಿಕೊಂಡಿದ್ದಾರೆ.
೬೦ ವರ್ಷ ಮೇಲ್ಪಟ್ಟವರು ನ್ಯಾಯಾಲಯಕ್ಕೆ ಬಾರದೆ ವರ್ಚುವಲ್ ವೇದಿಕೆಯಲ್ಲೇ ಕಲಾಪದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸುವ ಕುರಿತು ವಕೀಲರ ಸಂಘದೊಂದಿಗೆ ಚರ್ಚಿಸಿ ನಿರ್ಧರಿಸುವುದಾಗಿ ನ್ಯಾ. ಸೂರ್ಯ ಕಾಂತ್ ತಿಳಿಸಿದ್ದಾರೆ.
ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ ಹಾಗೂ ಇನ್ನಿತರ ರಾಜ್ಯಗಳಲ್ಲಿ ಚುನಾವಣಾ ಆಯೋಗ ಕೈಗೊಂಡಿರುವ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ಸಂದರ್ಭದಲ್ಲಿ ಅವರು ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ವಕೀಲ ರಾಕೇಶ್ವ ದ್ವಿವೇದಿ, ‘ನನಗೆ ಉಸಿರಾಟದ ಸಮಸ್ಯೆ ಇದೆ. ಟಿಪ್ಪಣಿ ಬರೆಯಲು ನನ್ನ ಸಹೋದ್ಯೊಗಿಗಳಿಗೆ ಅವಕಾಶ ನೀಡಿ. ಮುಂದಿನ ವಿಚಾರಣೆಯಲ್ಲಿ ನಾನು ವಿಡಿಯೊ ಕಾನ್ಛರೆನ್ಸ್ ಮೂಲಕ ಪಾಲ್ಗೊಳ್ಳ ಬಯಸುತ್ತೇನೆ. ಅವಕಾಶ ಮಾಡಿಕೊಡಿ’ ಎಂದು ಪೀಠವನ್ನು ಕೋರಿದರು.
ಇದಕ್ಕೆ ದನಿಗೂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ‘ನಮ್ಮ ಈ ವಯಸ್ಸಿನಲ್ಲಿ ದೆಹಲಿಯ ಕಳಪೆ ಗುಣಮಟ್ಟದ ಗಾಳಿಯನ್ನು ಸೇವಿಸುತ್ತಿದ್ದೇವೆ’ ಎಂದು ಕಳವಳ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ. ಸೂರ್ಯ ಕಾಂತ್, ‘ನಿನ್ನೆ ಒಂದು ಗಂಟೆಗಳ ಕಾಲ ನಡೆದಾಡಿದೆ. ಅಸ್ವಸ್ಥತೆ ಎಂದು ನನಗೂ ಅನಿಸಿತು. ೬೦ ವರ್ಷ ಮೀರಿದ ವಕೀಲರು ಖುದ್ದು ಹಾಜರಾಗಿ ವಾದ ಮಂಡಿಸುವುದಕ್ಕೆ ವಿನಾಯಿತಿ ನೀಡುವ ಸಾಧ್ಯತೆ ಕುರಿತು ಚಿಂತಿಸಲಾಗುವುದು. ನಾವು ಏನೇ ನಿರ್ಧಾರ ತೆಗೆದುಕೊಂಡರೂ, ಮೊದಲು ವಕೀಲರ ಸಂಘವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಮುಖ್ಯ. ಅವರಿಂದ ಪ್ರಸ್ತಾವನೆ ಬಂದರೆ, ನಿರ್ಧಾರ ತೆಗೆದುಕೊಳ್ಳುವುದು ಸುಲಭ’ ಎಂದರು. ಸುಪ್ರೀಂ ಕೋರ್ಟ್‌ನಲ್ಲಿ ಸದ್ಯ ಹೈಬ್ರಿಡ್ ಮಾದರಿಯಲ್ಲಿ ನ್ಯಾಯಾಲಯದ ಕಲಾಪಗಳು ನಡೆಯುತ್ತಿವೆ. ಇದರಲ್ಲಿ ಖುದ್ದು ಹಾಜರಿ ಮತ್ತು ವರ್ಚುವಲ್ ಮಾದರಿಯಲ್ಲಿ ಭಾಗವಹಿಸಲು ಅವಕಾಶವಿದೆ.





