ಬಾಲಿ: ಭಾರತ ಡಿಸೆಂಬರ್ ಒಂದರಿಂದ ಅಧಿಕೃತವಾಗಿ ಜಿ20 ಶೃಂಗಸಭೆಯ ಅಧ್ಯಕ್ಷ ಸ್ಥಾನ ಅಲಂಕರಿಸಲಿದೆ. ಬುಧವಾರ ನಡೆದ ಬಾಲಿ ಶೃಂಗಸಭೆಯ ಸಮಾರೋಪ ಸಮಾರಂಭದಲ್ಲಿ ಇಂಡೋನೇಷ್ಯಾದ ಅಧ್ಯಕ್ಷ ಜೊಕೊ ವಿಡೊಡೊ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜಿ20 ಶೃಂಗಸಭೆಯ ಅಧ್ಯಕ್ಷ ಸ್ಥಾನವನ್ನು ಹಸ್ತಾಂತರ ಮಾಡಿದರು. ಡಿಸೆಂಬರ್ 1 ರಿಂದ ಭಾರತ ಅಧಿಕೃತವಾಗಿ ಜಿ20ಯ ಅಧ್ಯಕ್ಷ ಸ್ಥಾನದಲ್ಲಿ ಆಸೀನವಾಗಲಿದೆ.
“” ಬಾಲಿಯ ಈ ಪ್ರಾಚೀನ ಮತ್ತು ಮಹಾನ್ ಭೂಮಿಯಲ್ಲಿ ಜಿ 20 ಅಧ್ಯಕ್ಷ ಸ್ಥಾನವನ್ನು ಏರಿದ್ದು, ವೈಯಕ್ತಿಕವಾಗಿ ನನಗೆ ಹಾಗೂ ಭಾರತಕ್ಕೆ ಅದೃಷ್ಟದ ಕ್ಷಣ ಎಂದು ಭಾವಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಈ ವೇಳೆ ಹೇಳಿದರು. ಭಾರತದ ಮುಂಬರುವ ಜಿ 20 ಅಧ್ಯಕ್ಷ ಸ್ಥಾನವು ಡಿಜಿಟಲ್ ವಿಭಜನೆಗೆ ಸೇತುವೆಯಾಗಿ ಕೆಲಸ ಮಾಡುತ್ತದೆ. ವಿಶೇಷವಾಗಿ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಮತ್ತು ಡಿಜಿಟಲ್ ತಂತ್ರಜ್ಞಾನಗಳು ಮತ್ತು ರೂಪಾಂತರದಿಂದ ಹೆಚ್ಚಿನ ಪ್ರಯೋಜನಗಳನ್ನು ಖಾತರಿಪಡಿಸುವುದರ ಮೇಲೆ ಕೇಂದ್ರೀಕರಿಸುತ್ತದೆ ʼʼ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದರು.
ಬಾಲಿಯಲ್ಲಿ ನಡೆದ ಜಿ 20 ಶೃಂಗಸಭೆಯಲ್ಲಿ ಡಿಜಿಟಲ್ ರೂಪಾಂತರದ ಕುರಿತು ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಮುಂದಿನ ದಶಕದಲ್ಲಿ ಡಿಜಿಟಲ್ ಸೇರ್ಪಡೆಗಾಗಿ ಒಟ್ಟಾಗಿ ಕೆಲಸ ಮಾಡುವುದಾಗಿ ಪ್ರತಿಜ್ಞೆ ಮಾಡುವಂತೆ ಇತರ ಜಿ 20 ನಾಯಕರನ್ನು ಒತ್ತಾಯಿಸಿದರು.
“ಅಭಿವೃದ್ಧಿಗಾಗಿ ಡೇಟಾ” ತತ್ವವು ನಮ್ಮ ಅಧ್ಯಕ್ಷತೆಯ ಒಟ್ಟಾರೆ ವಿಷಯವಾದ ‘ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ’ದ ಅವಿಭಾಜ್ಯ ಅಂಗವಾಗಿರುತ್ತದೆ” ಎಂದು ಅವರು ಹೇಳಿದರು.