ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮಾ ಜಿಲ್ಲೆಯಲ್ಲಿ ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಯಲ್ಲಿ ಐವರು ಯೋಧರಿಗೆ ಗಾಯಗಳಾಗಿದ್ದು, ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಕುಲ್ಗಾಮ್ ಜಿಲ್ಲಾ ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.
ಇಂದು ಬೆಳಿಗ್ಗೆಯಿಂದಲೇ ದೇವಸಾರ್ ಪ್ರದೇಶದಲ್ಲಿ ಭದ್ರತಾ ಪಡೆ ಹಾಗೂ ಉಗ್ರರ ನಡುವೆ ಗುಂಡಿನ ಕಾಳಗ ಪ್ರಾರಂಭವಾಗಿತ್ತು. ಈ ದಾಳಿ ಮಧ್ಯೆ ಎಎಸ್‌ಪಿ ಮಮ್ತಾಜ್ ಅಲಿ ಅವರಿಗೆ ಗಾಯವಾಗಿದ್ದು, ಇನ್ನುಳಿದ ಐವರು ಯೋಧರು ಗಾಯಗೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಇಬ್ಬರು ಉಗ್ರರ ಹತ್ಯೆ ಮಾಡಲಾಗಿದೆ. ಆದರೆ ಆ ಇಬ್ಬರೂ ಉಗ್ರರ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಹೇಳಿದ್ದಾರೆ.
ಇನ್ನು ಜಮ್ಮು-ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು, ಸೇನೆ ಸತತ ಕಾರ್ಯಾಚರಣೆ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಬಸ್ ನಿಲ್ದಾಣ ಹಾಗೂ ಇನ್ನುಳಿದ ತಗ್ಗು ಪ್ರದೇಶಗಳ ಮೇಲೆ ಪೊಲೀಸರು ಕಟ್ಟೆಚ್ಚರ ವಹಿಸಲಾಗಿದ್ದು, ಉಗ್ರರ ಎಡೆಮುರಿ ಕಟ್ಟಲೇಬೇಕೆಂದು ಶಪಥ ಮಾಡಿದ್ದಾರೆ.