ನಾಂದೇಡ್ : ಪ್ರೀತಿ ಹೆಸರಲ್ಲಿ ಹುಡುಗ-ಹುಡುಗಿ ಇಬ್ಬರು ಮೋಸ ಮಾಡುವ ಈ ಹೊತ್ತಿನಲ್ಲಿ ನಿಜವಾದ ಪ್ರೀತಿ ಸಿಗುವುದು ಬಲು ಅಪರೂಪ. ಪ್ರೀತಿ ಸಿಕ್ಕರೂ ಅದನ್ನು ಕೊನೆಯವರೆಗೂ ಉಳಿಸಿಕೊಳ್ಳುವುದು ನಿಜವಾದ ಸವಾಲು. ಎಷ್ಟೋ ಸಂಬಂಧಗಳಿಗೆ ಜಾತಿ, ಧರ್ಮ, ಬಣ್ಣ, ವೃತ್ತಿ, ಮನೆಯವರ ವಿರೋಧ ಅಡ್ಡಿಯಾಗುತ್ತದೆ. ಇವೆಲ್ಲವೂ ಮೀರಿ ನಿಲ್ಲುವ ಸಂಬಂಧಗಳು ಸಿಗುವುದು ಅಪರೂಪ. ಆದರೆ, ಇಲ್ಲೊಂದು ಘಟನೆಯಲ್ಲಿ ಪ್ರಿಯಕರ ಇಲ್ಲದಿದ್ರೂ, ಪ್ರಿಯಕರನ ಮೃತದೇಹವನ್ನೇ ಮದುವೆಯಾಗಿ ನಮ್ಮ ಸಂಬಂಧ ಶಾಶ್ವತವೆಂದು ಸಾರಿರುವ ಪ್ರಸಂಗ ಮಹಾರಾಷ್ಟ್ರದ ನಾಂದೇಡ್‌ನಲ್ಲಿ ನಡೆದಿದೆ.
ಘಟನೆ ವಿವರ ;
ಆಂಚಲ್ – ಸಕ್ಷಾಮ್ (20) ಕಳೆದ ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ತನ್ನ ಸಹೋದರರ ಮೂಲಕ ಆಂಚಲ್ ಸಕ್ಷಾಮ್‌ನನ್ನು ಭೇಟಿ ಆಗಿದ್ದಳು. ಅಲ್ಲಿಂದ ಶುರುವಾದ ಪರಿಚಯ ಪ್ರೀತಿಗೆ ತಿರುಗಿದೆ.
ಮೂರು ವರ್ಷಗಳಿಂದ ಆತ್ಮೀಯವಾಗಿದ್ದ ಇಬ್ಬರ ಸಂಬಂಧಕ್ಕೆ ಇತ್ತೀಚೆಗೆ ಮನೆಯವರೇ ವಿರೋಧ ವ್ಯಕ್ತಪಡಿಸಿದ್ದರು. ಆಂಚಲ್ ಕುಟುಂಬದವರು ಸಂಬಂಧವನ್ನು ವಿರೋಧಿಸುತ್ತಿದ್ದರು. ಆದರೆ ಆಂಚಲ್ ಏನೇ ಆದರೂ ಸಕ್ಷಾಮ್‌ನನ್ನೇ ಮದುವೆ ಆಗೋದಾಗಿ ಮನೆಯಲ್ಲಿ ಹೇಳಿದ್ದಳು.
ಆಂಚಲ್ ಸಕ್ಷಾಮ್ ಜತೆ ಮದುವೆ ಆಗಲು ಸಿದ್ಧಳಾಗಿದ್ದಳು. ಈ ವಿಚಾರ ಆಕೆಯ ಮನೆಯವರಿಗೆ ಕೋಪ ತರಿಸಿತ್ತು. ಸಕ್ಷಾಮ್ ಜತೆ ಸಂಬಂಧ ಮುಂದುವರೆಸಬೇಡ ಎಂದು ಮನೆಯವರು ಹಲವು ಬಾರಿ ಹೇಳಿದ್ದರೂ, ಆಂಚಲ್ ಕೇಳಿರಲಿಲ್ಲ. ಸಕ್ಷಾಮ್ ಬೇರೆ ಜಾತಿಯ ಹುಡುಗ ಆದ ಕಾರಣ ಆಂಚಲ್ ಮನೆಯವರಿಗೆ ಈ ಸಂಬಂಧ ಇಷ್ಟವಿರಲಿಲ್ಲ.
ಆಂಚಲ್ – ಸಕ್ಷಾಮ್ ಸಂಬಂಧವನ್ನು ಮುರಿಯಬೇಕೆನ್ನುವ ನಿಟ್ಟಿನಲ್ಲಿ, ಆಕೆಯ ಕುಟುಂಬಸ್ಥರು ನ.27 ರಂದು ಸಕ್ಷಾಮ್ ಮೇಲೆ ಹಲ್ಲೆ ನಡೆಸಿದ್ದಾರೆ. ಆತನಿಗೆ ಹೊಡೆದು ತಲೆಗೆ ಗುಂಡು ಹಾರಿಸಿ, ಕಲ್ಲಿನಿಂದ ತಲೆ ಜಜ್ಜಿ ಭೀಕರವಾಗಿ ಕೃತ್ಯವೆಸಗಿದ್ದಾರೆ.
ಪ್ರಿಯಕರ ಇನ್ನಿಲ್ಲವೆನ್ನುವ ವಿಚಾರ ತಿಳಿದು ದುಃಖದಲ್ಲಿ ಕುಸಿದ ಆಂಚಲ್, ಆತನನ್ನು ಕೊನೆಯ ಬಾರಿ ನೋಡಲು ಆತನ ಮನೆಗೆ ಭೇಟಿ ನೀಡಿದ್ದಾಳೆ. ಪ್ರಿಯಕರನ ಮೃತದೇಹವನ್ನು ಅಪ್ಪಿಕೊಂಡು ಮೃತ ದೇಹಕ್ಕೆ ಅರಿಶಿನ, ಹಣೆಗೆ ಸಿಂಧೂರ ಹಚ್ಚಿ, ಮೃತ ಗೆಳೆಯನ ಜತೆ ಮದುವೆ ಆಗಿದ್ದಾಳೆ.
ನಾನು ಬದುಕಿರುವವರೆಗೂ ನಿನ್ನ ಪತ್ನಿಯಾಗಿಯೇ ಇರುತ್ತೇನೆ ಎಂದು ಆಂಚಲ್ ಹೇಳಿದ್ದಾಳೆ. “ಸಾಕ್ಷಮ್ ಸಾವಿನಲ್ಲೂ ನಮ್ಮ ಪ್ರೀತಿ ಗೆದ್ದಿತು, ಮತ್ತು ನನ್ನ ತಂದೆ ಮತ್ತು ಸಹೋದರರು ಸೋತರು” ಎಂದು ಆಂಚಲ್ ಹೇಳುತ್ತಾ ಕಣ್ಣೀರಿಟ್ಟಿದ್ದಾರೆ.
ನನ್ನ ಪ್ರಿಯಕರನಿಗೆ ಈ ರೀತಿ ಮಾಡಿದವರಿಗೆ ಮರಣದಂಡನೆ ನೀಡಬೇಕೆಂದು ಆಂಚಲ್ ತನ್ನ ಮನೆಯವರ ವಿರುದ್ಧವೇ ಆಕ್ರೋಶದಿಂದ ಮಾತನಾಡಿದ್ದಾಳೆ.
ಈ ಸಂಬಂಧ ಪೊಲೀಸರು ಆರು ಆರೋಪಿಗಳ ವಿರುದ್ಧ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ.





