Mysore
25
scattered clouds

Social Media

ಮಂಗಳವಾರ, 13 ಜನವರಿ 2026
Light
Dark

ತೆಲಂಗಾಣದಲ್ಲಿ ಕಾರ್ಖಾನೆ ಸ್ಫೋಟ : 42ಕ್ಕೆ ಏರಿದ ಮೃತರ ಸಂಖ್ಯೆ

Factory explosion in Telangana

ಹೈದರಾಬಾದ್ : ತೆಲಂಗಾಣದ ರಾಸಾಯನಿಕ ಕಾರ್ಖಾನೆಯಲ್ಲಿನ ಸೋಮವಾರ ಸಂಭವಿಸಿದ ಸ್ಫೋಟದಲ್ಲಿ ಸಾವನ್ನಪ್ಪಿದವರ ಸಂಖ್ಯೆ 42 ಕ್ಕೆ ಏರಿಕೆಯಾಗಿದ್ದು, ರಕ್ಷಣಾ ಕಾರ್ಯಾಚರಣೆಯ ಸಮಯದಲ್ಲಿ ಹೆಚ್ಚಿನ ಶವಗಳು ಪತ್ತೆಯಾಗಿವೆ.

ಸೋಮವಾರ ರಾತ್ರಿಯವರೆಗೆ 12 ರಷ್ಟಿದ್ದ ಸಾವಿನ ಸಂಖ್ಯೆ ಮಂಗಳವಾರ ಬೆಳಿಗ್ಗೆ 42 ಕ್ಕೆ ಏರಿದ್ದು, ಈಗ ಮತ್ತಷ್ಟು ಹೆಚ್ಚಾಗಿದೆ. ಅವಶೇಷಗಳನ್ನು ತೆಗೆದು ಹಾಕುವಾಗ ಹಲವಾರು ಶವಗಳು ಅವಶೇಷಗಳ ಅಡಿಯಲ್ಲಿ ಪತ್ತೆಯಾಗಿವೆ. ರಕ್ಷಣಾ ಕಾರ್ಯಾಚರಣೆಯ ಕೊನೆಯ ಹಂತ ಇನ್ನೂ ಮುಂದುವರೆದಿದೆ. ಸತ್ತವರಲ್ಲಿ ಕೆಲವರ ಮೃತದೇಹ ಸಂಪೂರ್ಣ ಸುಟ್ಟುಹೋಗಿದ್ದು, ಗುರುತು ಪತ್ತೆಹಚ್ಚಲು ಡಿಎನ್‍ಎ ಪರೀಕ್ಷೆ ನಡೆಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರಿತೋಷ್ ಪಂಕಜ್ ತಿಳಿಸಿದ್ದಾರೆ.

ತೆಲಂಗಾಣ ರಾಸಾಯನಿಕ ಕಾರ್ಖಾನೆ ಸ್ಫೋಟದಲ್ಲಿ ಮೃತಪಟ್ಟ ಕನಿಷ್ಠ ಎಂಟು ಜನರ ಕುಟುಂಬಗಳಿಗೆ ತಲಾ ಎರಡು ಲಕ್ಷ ರೂಪಾಯಿಗಳನ್ನು ಪರಿಹಾರವಾಗಿ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದರು. ಗಾಯಗೊಂಡ ಸುಮಾರು ಹನ್ನೆರಡು ಜನರಿಗೆ ಐವತ್ತು ಸಾವಿರ ರೂಪಾಯಿಗಳನ್ನು ನೀಡಲಾಗುವುದು ಎಂದು ಅವರು ಹೇಳಿದರು.

ಪಾಶಮೈಲಾರಂ ಕೈಗಾರಿಕಾ ಪ್ರದೇಶದಲ್ಲಿರುವ ಸಿಗಾಚಿ ಫಾರ್ಮಾ ಕಂಪನಿಯ ರಿಯಾಕ್ಟರ್‍ನಲ್ಲಿ ರಾಸಾಯನಿಕ ವಸ್ತುವಿಗೆ ಬೆಂಕಿ ಹೊತ್ತಿಕೊಂಡು ಸ್ಫೋಟ ಸಂಭವಿಸಿದೆ ಎಂದು ಮೂಲಗಳು ಹೇಳಿವೆ. ಆದರೆ, ಸ್ಫೋಟಕ್ಕೆ ನಿಖರ ಕಾರಣ ಸಮಗ್ರ ಪರಿಶೀಲನೆಯ ಬಳಿಕವೇ ತಿಳಿಯಲಿದೆ ಎಂದು ತಾಂತ್ರಿಕ ತಜ್ಞರು ತಿಳಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಮೋದಿ, `ತೆಲಂಗಾಣದ ಸಂಗರೆಡ್ಡಿಯಲ್ಲಿನ ಕಾರ್ಖಾನೆಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಜೀವಹಾನಿಯಾಗಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಸಂತಾಪ ಸೂಚಿಸುತ್ತೇನೆ. ಗಾಯಾಳುಗಳು ಬೇಗ ಗುಣಮುಖರಾಗಲಿ. ಮೃತರ ಪ್ರತಿ ಸಂಬಂಧಿಕರಿಗೆ 2 ಲಕ್ಷ ರೂ. ಪರಿಹಾರ ನೀಡಲಾಗುವುದು. ಗಾಯಾಳುಗಳಿಗೆ 50,000 ರೂ. ಪರಿಹಾರ ನೀಡಲಾಗುವುದು ಎಂದು ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ.

ಇನ್ನೂ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಟ್ವಿಟ್‌ ಮಾಡಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. `ತೆಲಂಗಾಣದ ರಾಸಾಯನಿಕ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದ ಸುದ್ದಿ ಅತ್ಯಂತ ದುಃಖಕರ ಮತ್ತು ಕಳವಳಕಾರಿ. ಈ ಘಟನೆಯಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ನನ್ನ ಸಂತಾಪಗಳು. ಗಾಯಗೊಂಡವರೆಲ್ಲರೂ ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ನಾನು ಆಶಿಸುತ್ತೇನೆ. ರಾಜ್ಯ ಸರ್ಕಾರ ಮತ್ತು ಆಡಳಿತವು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದೆ. ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸಲು ಪ್ರಯತ್ನಗಳು ಮುಂದುವರೆದಿವೆ. ಈ ಕಷ್ಟದ ಸಮಯದಲ್ಲಿ, ನಾವು ಎಲ್ಲ ರೀತಿಯಲ್ಲೂ ಸಂತ್ರಸ್ತ ಕುಟುಂಬಗಳೊಂದಿಗೆ ನಿಲ್ಲುತ್ತೇವೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಸ್ಫೋಟಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲವಾದರೂ, ರಾಸಾಯನಿಕ ಕ್ರಿಯೆಯಿಂದ ಇದು ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಮಂಗಳವಾರ, ಸ್ಥಳೀಯ ಮಾಧ್ಯಮಗಳು ಎನ್‍ಡಿಆರ್‌ಎಫ್, ಹೈಡ್ರಾ ಮತ್ತು ತೆಲಂಗಾಣ ಅಗ್ನಿಶಾಮಕ ವಿಪತ್ತು ನಿರ್ವಹಣಾ ತಂಡಗಳಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ವರದಿ ಮಾಡಿವೆ.

Tags:
error: Content is protected !!