ವಾಷಿಂಗ್ಟನ್: ಇಸ್ರೇಲ್ ಹಾಗೂ ಇರಾನ್ ನಡುವಿನ ಸಂಘರ್ಷ ಐದನೇ ದಿನಕ್ಕೆ ಕಾಲಿಟ್ಟಿದ್ದು, ಇರಾನ್ ಜನತೆ ತಕ್ಷಣವೇ ಟೆಹ್ರಾನ್ ತೊರೆಯುವಂತೆ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೂಚನೆ ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ನಾನು ಹೇಳಿದ ಒಪ್ಪಂದಕ್ಕೆ ಇರಾನ್ ಸಹಿ ಹಾಕಬೇಕಿತ್ತು. ಎಂತಹ ನಾಚಿಕೆಗೇಡಿನ ಸಂಗತಿ. ಮಾನವ ಜೀವ ವ್ಯರ್ಥ. ಇರಾನ್ ಪರಮಾಣು ಶಸ್ತ್ರಾಸ್ತ್ರವನ್ನು ಹೊಂದಲು ಸಾಧ್ಯವಿಲ್ಲ. ನಾನು ಅದನ್ನು ಮತ್ತೆ ಮತ್ತೆ ಹೇಳಿದ್ದೇನೆ. ಎಲ್ಲರೂ ತಕ್ಷಣ ಟೆಹ್ರಾನ್ ಅನ್ನು ಬಿಟ್ಟು ಹೊರಡಿ ಎಂದು ಎಚ್ಚರಿಕೆ ನೀಡಿದ್ದಾರೆ.
ಇನ್ನು ಇಂದು ಮುಂಜಾನೆ ಟೆಹ್ರಾನ್‌ನಲ್ಲಿ ಸ್ಫೋಟಗಳು ಹಾಗೂ ವಾಯು ರಕ್ಷಣಾ ಗುಂಡಿನ ದಾಳಿ ನಡೆದಿದ್ದು, ಐದು ದಿನಗಳಲ್ಲಿ ಇರಾನ್‌ನಲ್ಲಿ 224 ಮಂದಿ ಸಾವನ್ನಪ್ಪಿದ್ದಾರೆ.
ಇಸ್ರೇಲ್‌ನಲ್ಲಿ 24 ನಾಗರಿಕರು ಸಾವನ್ನಪ್ಪಿದ್ದು, ಇರಾನ್ ದಾಳಿಯಿಂದ ಹಾನಿಗೊಳಗಾದ ಸುಮಾರು 3000 ಇಸ್ರೇಲಿಗಳನ್ನು ಸ್ಥಳಾಂತರಿಸಲಾಗಿದೆ ಎಂದು ಇಸ್ರೇಲ್ ಹಣಕಾಸು ಸಚಿವ ಮಾಹಿತಿ ನೀಡಿದ್ದಾರೆ.






