ನವದೆಹಲಿ: ನಮಗೆ ಇವಿಎಂಗಳ ಮೇಲೆ ಕಿಂಚಿತ್ತೂ ನಂಬಿಕೆಯಿಲ್ಲ. ಆದ್ದರಿಂದ ನಮಗೆ ಬ್ಯಾಲೆಟ್ ಪೇಪರ್ ಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ.
ಈ ಬಗ್ಗೆ ನವದೆಹಲಿಯಲ್ಲಿಂದು ಮಾತನಾಡಿದ ಅವರು, ನಮಗೆ ಇವಿಎಂ ಮೂಲಕ ಚುನಾವಣೆ ನಡೆಸುವುದು ಬೇಡ. ನಾವು ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸಲು ಬಯಸುತ್ತೇವೆ. ಹಾಗಾಗಿ ನಾವು ಭಾರತ್ ಜೋಡೋ ಯಾತ್ರೆ ನಡೆಸಿದಂತೆಯೇ ಬ್ಯಾಲೆಟ್ ಪೇಪರ್‌ಗಳನ್ನು ಬಳಸಿಕೊಂಡು ಚುನಾವಣೆಗಾಗಿ ರಾಷ್ಟ್ರವ್ಯಾಪಿ ಪ್ರಚಾರ ನಡೆಸುತ್ತೇವೆ ಎಂದು ಮಾಹಿತಿ ನೀಡಿದರು.
ಇನ್ನು ಇವಿಎಂ ಬಗ್ಗೆ ಹೇಳಿಕೆ ನೀಡಿದ ಬೆನ್ನಲ್ಲೇ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಬಿಜೆಪಿ ನಾಯಕರು ಕಿಡಿಕಾರಿದ್ದು, ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ಅವರು ಕಟುವಾಗಿ ಟೀಕಿಸಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಇಂತಹ ಹೇಳಿಕೆ ನೀಡುವ ಮೂಲಕ ಸುಪ್ರೀಂಕೋರ್ಟ್ ಆದೇಶಕ್ಕೆ ಅಗೌರವ ತೋರಿದ್ದಾರೆ ಎಂದು ಕಿಡಿಕಾರಿದ್ದಾರೆ.
ಕಾಂಗ್ರೆಸ್ ಚುನಾವಣೆಯಲ್ಲಿ ಗೆದ್ದಾಗ ಇವಿಎಂಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತವೆ. ಆದರೆ ಬಿಜೆಪಿ ಗೆದ್ದರೆ ಇವಿಎಂಗಳು ಸರಿ ಇರಲ್ಲ. ತಮ್ಮ ಸೋಲನ್ನು ಇವಿಎಂಗಳ ಮೇಲೆ ದೂಷಿಸಲು ಪ್ರಯತ್ನಿಸುತ್ತಾರೆ ಎಂದು ಟೀಕೆ ಮಾಡಿದರು.