ನವದೆಹಲಿ: ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೇಶದ ಮೂರನೇ ಶ್ರೀಮಂತ ಸಿಎಂ ಆಗಿ ಹೊರ ಹೊಮ್ಮಿದ್ದಾರೆ.
ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರು 3ನೇ ಸ್ಥಾನದಲ್ಲಿದ್ದಾರೆ ಎಂದು ವರದಿಯೊಂದು ಬಹಿರಂಗಪಡಿಸಿದೆ.
ದೇಶದ ಒಟ್ಟು 30 ಸಿಎಂಗಳ ಪಟ್ಟಿ ಬಿಡುಗಡೆ ಮಾಡಿದ್ದು, 30 ಸಿಎಂಗಳ ಒಟ್ಟು ಆಸ್ತಿ 1,632 ಕೋಟಿ ರೂ.ಗಳಷ್ಟಿದ್ದು, ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಅವರು ಒಟ್ಟು 931 ಕೋಟಿ ರೂ. ಮೌಲ್ಯದ ಆಸ್ತಿ ಹೊಂದುವ ಮೂಲಕ ಮೊದಲ ಸ್ಥಾನದಲ್ಲಿದ್ದರೆ, ಅರುಣಾಚಲ ಪ್ರದೇಶದ ಸಿಎಂ ಪೆಮಾ ಖಂಡು ಅವರು 332 ಕೋಟಿ ರೂ.ಗೂ ಹೆಚ್ಚು ಆಸ್ತಿ ಹೊಂದುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ.
ಇನ್ನು ಸಿದ್ದರಾಮಯ್ಯ ಅವರು 51 ಕೋಟಿ ರೂ. ಮೌಲ್ಯದ ಆಸ್ತಿಯೊಂದಿಗೆ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ. ಚುನಾವಣೆ ವೇಳೆ ಅಭ್ಯರ್ಥಿಗಳು ಸಲ್ಲಿಸಿದ ಅಫಿಡವಿಟ್ ಆಧರಿಸಿ ಎಡಿಆರ್ ಮತ್ತು ನ್ಯಾಷನಲ್ ಎಲೆಕ್ಷನ್ ವಾಚ್ ಸಂಸ್ಥೆಯು ಭಾರತದ ಶ್ರೀಮಂತ ಮುಖ್ಯಮಂತ್ರಿಗಳ ಕುರಿತ ವರದಿ ಬಿಡುಗಡೆ ಮಾಡಿದೆ.
ಜೊತೆಗೆ ದೇಶದ 30 ಮುಖ್ಯಮಂತ್ರಿಗಳು (ಮಣಿಪುರವನ್ನು ರಾಷ್ಟ್ರಪತಿ ಆಳ್ವಿಕೆ ಇದ್ದ ಹಿನ್ನೆಲೆಯಲ್ಲಿ ಕೈಬಿಡಲಾಗಿದೆ) ಒಟ್ಟಾರೆ 1,600 ಕೋಟಿ ರು. ಆಸ್ತಿ ಹೊಂದಿದ್ದಾರೆ. ವಿಶೇಷವೆಂದರೆ 30 ಮುಖ್ಯಮಂತ್ರಿಗಳ ಒಟ್ಟಾರೆ ಆಸ್ತಿಯಲ್ಲಿ ಅರ್ಧಕ್ಕೂ ಹೆಚ್ಚು ಆಸ್ತಿಯನ್ನು ಆಂಧ್ರ ಮುಖ್ಯಮಂತ್ರಿಗಳೇ ಹೊಂದಿರುವುದು ವಿಶೇಷವಾಗಿದೆ.





