Mysore
28
light rain

Social Media

ಬುಧವಾರ, 25 ಜೂನ್ 2025
Light
Dark

ದೆಹಲಿ ಚಲೋ: ರೈತರ ಮೇಲೆ ಅಶ್ರುವಾಯು ಪ್ರಯೋಗ

ಹೊಸದಿಲ್ಲಿ: ಕೇಂದ್ರ ಸರ್ಕಾರ ನೀಡಿದ್ದ ಭರವಸೆಗಳಾದ ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ), ಕೃಷಿ ಸಾಲ ಮನ್ನಾ ಸೇರಿದಂತೆ ಇನ್ನಿತರ ಭರವಸೆಗಳನ್ನು ಈಡೇರಿಸುವಂತೆ ಆಗ್ರಹಿಸಿ ʼದೆಹಲಿ ಚಲೋʼ ಹೋರಾಟ ಕೈಗೊಂಡಿರುವ ರೈತರ ಮೇಲೆ ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ.

ಈ ಮೂಲಕ ರೈತರು ದೆಹಲಿಗೆ ಹೋಗದಂತೆ ತಡೆಹಿಡಿಯಲಾಗಿದೆ. ಪಂಜಾಬ್‌ ಮತ್ತು ಹರಿಯಾಣ ರೈತರು ದೆಹಲಿ ಚಲೋಗೆ ಕರೆಕೊಟ್ಟಿದ್ದು, ದೆಹಲಿಯತ್ತ ಹೊರಟಿದ್ದರು. ಈ ವೇಳೆ ಪಂಜಾಬ್‌ ಮತ್ತು ಹರಿಯಾಣ ನಡುವಿನ ಶಂಭುಗಡಿಯಲ್ಲಿ ಪೊಲೀಸರು ರಸ್ತೆಗೆ ಬೃಹತ್‌ ಮುಳ್ಳು ಬೇಲಿಗಳನ್ನು ಹಾಕುವ ಮೂಲಕ ರೈತರನ್ನು ತಡೆದಿದ್ದಾರೆ. ಅದನ್ನು ಲೆಕ್ಕಿಸದೇ ಮುಳ್ಳುತಂತಿ ಭೇದಿಸಲು ಮುಂದಾದ ರೈತರುಗಳ ಮೇಲೆ ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ.

ಪ್ರತಿಭಟನೆ ನಿರತ ಹಲವಾರು ರೈತ ಮುಖಂಡರುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದರೆ ಕೇಂದ್ರ ಸರ್ಕಾರ ಇದರ ಬಗ್ಗೆ ಪ್ರತಿಕ್ರಿಯಿಸಿ ಸಂಧಾನದ ಬಾಗಿಲು ಮುಚ್ಚಿವೆ ಎಂದು ಹೇಳಿದೆ.

ಕೇಂದ್ರ ಸರ್ಕಾರ ಜಾರಿ ಮಾಡಿದ್ದ ಮೂರು ಕೃಷಿ ಕಾನೂನುಗಳನ್ನು ರದ್ದುಮಾಡುವಂತೆ ಹಾಗೂ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ 2020 ರಲ್ಲಿ ಸುಮಾರು ಒಂದು ವರ್ಷಗಳ ಕಾಲ ರೈತರು ಸತತ ಹೋರಾಟ ಮಾಡಿದ್ದರು.ಇದರ ಫಲವಾಗಿ ಕೇಂದ್ರ ಸರ್ಕಾರ ಆ ಕಾಯ್ದೆಗಳನ್ನು ವಾಪಸ್‌ ಪಡೆಯುವುದರ ಜೊತೆಗೆ ಕೃಷಿ ಸಾಲ ಮನ್ನಾ, ಎಂಎಸ್‌ಪಿ ಯ ಭರವಸೆಗಳನ್ನು ನೀಡಿತ್ತು.

ಈಗ ಮೂರು ವರ್ಷ ಕಳೆದರೂ ಕೇಂದ್ರ ಸರ್ಕಾರ ತಾನು ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿರುವುದರಿಂದ ರೈತರು ದೆಹಲಿ ಚಲೋಗೆ ಕರೆ ನೀಡಿದ್ದರು. ಆದರೆ ಈಗ ರೈತರನ್ನು ಶಂಭು ಗಡಿಯಲ್ಲಿ ಪೊಲೀಸರು ತಡೆದಿದ್ದಾರೆ.

Tags:
error: Content is protected !!