ನವದೆಹಲಿ: ಭಾರತದ ಮೋಸ್ಟ್ ವಾಂಟೆಡ್ ಭೂಗತಪಾತಕಿ ಹಾಗೂ ಮುಂಬೈ ಸರಣಿ ಬಾಂಬ್ ಸ್ಫೋಟದ ಪ್ರಮುಖ ರೂವಾರಿ ದಾವುದ್ ಇಬ್ರಾಹಿಂನ ಆಪ್ತ ಸಹಚರ ಕುಖ್ಯಾತ ಅಂತರರಾಷ್ಟ್ರೀಯ ಮಾದಕ ವಸ್ತು ಕಿಂಗ್ ಪಿನ್ ಸಲೀಂ ಡೋಲನನ್ನು ಭಾರತಕ್ಕೆ ಗಡೀಪಾರು ಮಾಡಲಾಗಿದೆ.
ರೆಡ್ ಕಾರ್ನರ್ ನೋಟೀಸ್ ಅಡಿಯಲ್ಲಿ ಬೇಕಾಗಿದ್ದ ಕುಖ್ಯಾತ ಭಾರತೀಯ ಮಾದಕವಸ್ತು ದೊರೆ ಡೋಲಾನನ್ನು ಇಸ್ತಾನ್‍ಬುಲ್‌ನಲ್ಲಿ ನಡೆದ ಉನ್ನತ ಮಟ್ಟದ ಕಾರ್ಯಾಚರಣೆಯ ನಂತರ ಟರ್ಕಿಶ್ ಅಧಿಕಾರಿಗಳು ಬಂಧಿಸಿದ ಒಂದು ದಿನದ ಬಳಿಕ ಗಡೀಪಾರು ಮಾಡಿದ್ದಾರೆ. ಇದರಿಂದ ದಾವುದ್ ಇಬ್ರಾಹಿಂಗೆ ಬಾರಿ ಹಿನ್ನಡೆಯಾಗಿದ್ದು, ಇದು ಅಂತಾರಾಷ್ಟ್ರೀಯ ಮಾದಕ ವಸ್ತು ವ್ಯಾಪಾರಕ್ಕೆ ತೀವ್ರ ಹೊಡೆತ ಬಿದ್ದಿದೆ ಎಂದು ವ್ಯಾಖ್ಯಾನಿಸಲಾಗಿದೆ.
ಟರ್ಕಿಯ ಇಸ್ತಾನ್‍ಬುಲ್‌ನಲ್ಲಿ ಬಂಧನಕ್ಕೊಳಗಾದ ಕೆಲವು ದಿನಗಳ ನಂತರ ಡೋಲಾನನ್ನು ಗಡೀಪಾರು ಮಾಡಲಾಗಿದೆ. ರೆಡ್ ಕಾರ್ನರ್ ನೋಟೀಸ್ ಆಧರಿಸಿ ಟರ್ಕಿಯ ರಾಷ್ಟ್ರೀಯ ಗುಪ್ತಚರ ಸಂಸ್ಥೆ, ಎಂಐಟಿ ಮತ್ತು ಸ್ಥಳೀಯ ಪೊಲೀಸ್ ಘಟಕಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಡೋಲಾನನ್ನು ಬಂಧಿಸಲಾಗಿದೆ.
ಯಶಸ್ವಿ ಜಂಟಿ ಕಾರ್ಯಾಚರಣೆಯ ನಂತರ, ಮುಂಜಾನೆ ವಿಶೇಷ ವಿಮಾನದ ಮೂಲಕ ಡೋಲಾನನ್ನು ದೆಹಲಿ ವಿಮಾನ ನಿಲ್ದಾಣಕ್ಕೆ ಕರೆತರಲಾಗಿದೆ. ಜಾಗತಿಕ ಸಿಂಡಿಕೇಟ್‌ಗಳೊಂದಿಗಿನ ಅವರ ಸಂಪರ್ಕದ ಕುರಿತು ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
ಹೆಚ್ಚಿನ ವಿಚಾರಣೆಗಾಗಿ ಮುಂಬೈ ಪೊಲೀಸರಿಗೆ ಹಸ್ತಾಂತರಿಸುವ ನಿರೀಕ್ಷೆಯಿದೆ. ಇಸ್ತಾನ್‍ಬುಲ್ ಪೊಲೀಸ್ ಇಲಾಖೆಯ ಮಾದಕ ದ್ರವ್ಯ ಅಪರಾಧ ವಿಭಾಗವು ಈತನನ್ನು ಏ.25 ರಂದು ಬಂಧಿಸಿತು. ಮಾದಕವಸ್ತು ಕಳ್ಳಸಾಗಣೆಗಾಗಿ ಬೇಕಾಗಿದ್ದ ಡೋಲಾ, ಬೇಲಿಕ್ಡುಜು ಜಿಲ್ಲೆಯ ನಿವಾಸವೊಂದರಲ್ಲಿ ಅಡಗಿಕೊಂಡಿದ್ದ. ತಾಂತ್ರಿಕ ಮತ್ತು ಭೌತಿಕ ಕಣ್ಗಾವಲು ಮೂಲಕ ಭದ್ರತಾ ತಂಡಗಳು ಶಂಕಿತನ ನಿಖರವಾದ ಸ್ಥಳವನ್ನು ದೃಢಪಡಿಸಿದ ನಂತರ, ಡೋಲಾನನ್ನು ಬಂಧಿಸಲು ಗುರುತಿಸಲಾದ ವಿಳಾಸದಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಬಂಧನಕ್ಕೊಳಗಾದ ನಂತರ, ಅವನನ್ನು ತಕ್ಷಣ ಭಾರತಕ್ಕೆ ಗಡೀಪಾರು ಮಾಡುವ ಪ್ರಕ್ರಿಯೆಗೊಳಪಡಿಸಲಾಯಿತು.





