ಯಳಂದೂರು: ಚಾಮರಾಜನಗರ ಜಿಲ್ಲೆಯ ಪವಿತ್ರ ಯಾತ್ರಾ ಕ್ಷೇತ್ರ ಬಿಳಿಗಿರಿರಂಗನ ಬೆಟ್ಟದ ಶ್ರೀ ತಿರುವೆಂಗಳನಾಥ ಸ್ವಾಮಿ ದೇವಾಲಯಕ್ಕೂ ಯಳಂದೂರು ಮೂಲದ ವರದೇ ನಾಯಕ ವಂಶಕ್ಕೂ ಅವಿನಾಭಾವ ಸಂಬಂಧವಿದೆ ಎಂಬುದಕ್ಕೆ ಇತಿಹಾಸ ಮತ್ತು ಕುಲಮೂಲ ಪರಂಪರೆಯಲ್ಲಿ ಸಾಕ್ಷ್ಯಾಧಾರಗಳು ಲಭ್ಯವಾಗಿವೆ.
ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿದ್ದ ವರದೆಯನಾಯಕರು ಈ ದೇವಾಲಯದ ನಿರ್ಮಾತೃಗಳು ಎಂದು ಸ್ಥಳೀಯ ಇತಿಹಾಸ ಹೇಳುತ್ತದೆ. ಪರಾಕ್ರಮಿ ಸೇನಾಧಿಪತಿ ಹೊಣ್ಣನಾಯಕರ ಪುತ್ರರಾದ ವರದೆಯನಾಯಕರು, ಎರಡನೇ ದೇವರಾಯನ ಕಾಲದಲ್ಲಿ ಯಳಂದೂರು ಪಟ್ಟಣವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಹದಿನಾಡು ಪ್ರಾಂತ್ಯವನ್ನು ಆಳ್ವಿಕೆ ನಡೆಸಿದ್ದರು ಎಂಬುದಕ್ಕೆ ‘ಇತಿಹಾಸ ದರ್ಶನ’ ಗ್ರಂಥದ (ಪುಟ 319) ಶಾಸನಾಧಾರಗಳಿವೆ.
ಈ ವಂಶದ ಮುಂದುವರಿಕೆಯಾಗಿ ಸಿಂಘದೇವನಾಯಕರು ಹದಿನಾಡು ಪ್ರಾಂತ್ಯವನ್ನಾಳಿದರು. ನಂತರದ ಕುಡಿಯಾದ ಮುದ್ದುರಾಜನಾಯಕರು ಬಿಳಿಗಿರಿರಂಗನ ಬೆಟ್ಟದ ದೇವಾಲಯದ ಮಹಾದ್ವಾರದ ಬಾಗಿಲನ್ನು ನಿರ್ಮಿಸಿ, ತಮ್ಮ ಪೂರ್ವಜ ವರದೆಯನಾಯಕರ ಉಬ್ಬುಶಿಲ್ಪದ ಪ್ರತಿಮೆಯನ್ನು ಪ್ರತಿಷ್ಠಾಪಿಸಿದ್ದು ಈ ಕುಲದ ದೇವಾಲಯದ ಮೇಲಿನ ಭಕ್ತಿಗೆ ಸಾಕ್ಷಿಯಾಗಿದೆ.
ವರದೆಯನಾಯಕರ ಹೆಸರಿನಲ್ಲಿ ದತ್ತಿ ಸ್ಥಾಪಿಸಿ, ವರದತ್ತಿ ಮಂಟಪವನ್ನು ಪೂಜಿಸುವ ಸಂಪ್ರದಾಯವನ್ನು ನಾಯಕ ಸಮುದಾಯ ಇಂದಿಗೂ ಮುಂದುವರಿಸಿಕೊಂಡು ಬಂದಿದೆ. ದೇವಾಲಯದಿಂದ ತೊಳಪ್ಪಚಾರ್ ಎಂಬ ಗುರುವನ್ನು ನೇಮಿಸಿ, ಮುದ್ರೆಯುಳ್ಳ ಉಂಗುರವನ್ನು ಪೂಜಿಸಿ ಕುಲಸ್ಥರಿಗೆ ನೀಡುವ ವಿಶಿಷ್ಟ ಪದ್ಧತಿ ಇಂದಿಗೂ ಜೀವಂತವಾಗಿದೆ.
ಪ್ರತಿವರ್ಷ ನಡೆಯುವ ವರದತ್ತಿ ಮಂಟಪೋತ್ಸವದ ಸಂದರ್ಭದಲ್ಲಿ ವರದೆಯನಾಯಕರನ್ನು ಸ್ಮರಿಸಿ ಗೌರವಿಸುವ ಆಚರಣೆಯನ್ನು ನಾಯಕ ಸಮುದಾಯದವರು ತಪ್ಪದೆ ನೆರವೇರಿಸುತ್ತಿದ್ದಾರೆ. ಇದು ತಮ್ಮ ಪೂರ್ವಜರ ಇತಿಹಾಸ, ಪರಂಪರೆ ಮತ್ತು ಸಾಂಸ್ಕೃತಿಕ ಅಸ್ಮಿತೆಯನ್ನು ತಲೆಮಾರಿನಿಂದ ತಲೆಮಾರಿಗೆ ಸಂರಕ್ಷಿಸಿಕೊಂಡು ಬರುತ್ತಿರುವುದಕ್ಕೆ ಜೀವಂತ ಉದಾಹರಣೆಯಾಗಿದೆ ಎಂದು ಹಿರಿಯರು ಅಭಿಪ್ರಾಯಪಟ್ಟಿದ್ದಾರೆ.




