ನವದೆಹಲಿ: 2024ರ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡುವ ಮೂಲಕ ಸಂವಿಧಾನ ಮತ್ತು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರು ನಂಬಿಕೆ ಇರಿಸಿದ್ದಕ್ಕೆ ಧನ್ಯವಾದಗಳು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಸತತ ಮೂರನೇ ಬಾರಿಗೆ ಕೇಂದ್ರದಲ್ಲಿ ಸರ್ಕಾರ ರಚಿಸಿದ ಬಳಿಕ ಮೊದಲ ಮನ್ ಕಿ ಬಾತ್ ಕಾರ್ಯಕ್ರಮದ ಮೊದಲ ಸಂಚಿಕೆಯಲ್ಲಿ ದೇಶದ ಜನರೊಂದಿಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ಇದು ಪ್ರಧಾನಿ ಮೋದಿ ಅವರ ಮನ್ ಕಿ ಬಾತ್ ಕಾರ್ಯಕ್ರಮದ 111ನೇ ಸಂಚಿಕೆಯಾಗಿದ್ದು, ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವನ್ನು ಅಧಿಕಾರಕ್ಕೆ ಮರು ಆಯ್ಕೆ ಮಾಡಿದ್ದಕ್ಕಾಗಿ ದೇಶದ ಜನತೆಗೆ ಕೃತಜ್ಞತೆ ಸಲ್ಲಿಸಿದರು.
ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಮ್ಮ ನಂಬಿಕೆಯನ್ನು ಜನರು ಚುನಾವಣೆಯಲ್ಲಿ ಮರು ಸ್ಥಾಪಿಸಿದ್ದಾರೆ. ಅಲ್ಲದೇ 2024ರ ಚುನಾವಣೆ ವಿಶ್ವದ ಅತಿದೊಡ್ಡ ಚುನಾವಣೆಯಾಗಿದೆ. ಇಷ್ಟು ದೊಡ್ಡ ಚುನಾವಣೆ ಜಗತ್ತಿನ ಯಾವುದೇ ದೇಶದಲ್ಲಿ ನಡೆದಿಲ್ಲ. ಈ ಚುನಾವಣೆಯಲ್ಲಿ ದೇಶದ 65 ಕೋಟಿ ಜನರು ಮತ ಚಲಾಯಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಲೋಕಸಭೆ ಚುನಾವಣೆ ಯಶಸ್ವಿಯಾಗಿ ನಡೆಸಿದ್ದಕ್ಕಾಗಿ ಚುನಾವಣಾ ಆಯೋಗ ಮತ್ತು ಮತದಾನ ಪ್ರಕ್ರಿಯೆಗೆ ಸಂಬಂಧಿಸಿದ ಪ್ರತಿಯೊಬ್ಬರನ್ನು ಅಭಿನಂದಿಸಿದರು.